ಬೆಂಗಳೂರು: ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಮುಂದುವರಿದಿದೆ. ಸಾಲು ಸಾಲು ಸಾಹಿತಿಗಳು ಪಠ್ಯ ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಇದೀಗ ಇದರ ಸಾಲಿಗೆ ಸಾಹಿತಿ ಬೊಳುವಾರು ಮಹಮದ್ ಕುಂಞಿ ಸೇರ್ಪಡೆಯಾಗಿದ್ದಾರೆ. ತಮ್ಮ ಪಠ್ಯವನ್ನು ಕಿತ್ತುಹಾಕಿ ಎಂದು ಶಿಕ್ಷಣ ಸಚಿವರನ್ನು ಒತ್ತಾಯಿಸಿರುವ ಅವರು ಈ ಕುರಿತು ಸಾಮಾಜಿಕ ಜಾಲತಾಣ ಫೇಸ್ ಬುಕ್ನಲ್ಲಿ ಬರೆದುಕೊಂಡಿದ್ದಾರೆ.
5 ನೇ ತರಗತಿ ಪುಸ್ತಕದ ಒಟ್ಟು 8 ಪುಟಗಳ ‘ಸುಳ್ಳು ಹೇಳಬಾರದು’ ಪಠ್ಯ ಕೈಬಿಡಿ. ಪ್ರಸಕ್ತ ವರ್ಷದಲ್ಲಿ ಪರಿಷ್ಕೃತಗೊಂಡಿರುವ ನನ್ನ ಕತೆಯೊಂದರ ಆಶಯಗಳು, ಇತರ ಕೆಲವು ಪಠ್ಯಗಳ ಆಶಯಗಳೊಂದಿಗೆ ಸರಿಯಾಗಿ ಹೊಂದಿಕೆಯಾಗದಿರುವ ಸಾಧ್ಯತೆ ಇದೆ. ನಮ್ಮ ಪುಟ್ಟ ಮಕ್ಕಳು ಗೊಂದಲಕ್ಕೊಳಗಾಗುವ ಸಾಧ್ಯತೆಗಳುಂಟು. ದಯವಿಟ್ಟು ‘ಸುಳ್ಳು ಹೇಳಬಾರದು’ ಎಂಬ ಈ ನನ್ನ ಕತೆಯನ್ನು ಕಿತ್ತು ಹಾಕಿ, ಪರಿಷ್ಕೃತ ಪಠ್ಯ ಕ್ರಮದ ಆಶಯಗಳಿಗೆ ಹೊಂದಿಕೊಳ್ಳುವ ಬೇರೊಂದು ಪಾಠವನ್ನು ಸೇರಿಸಿಕೊಳ್ಳಿ ಎಂದು ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ.
ಒಂದು ಸೋಜಿಗದ ಪದ್ಯ ಕೈ ಬಿಡಿ:ಪಠ್ಯ ಹಿಂಪಡೆಯುವಂತೆ ಇದರ ಸಾಲಿಗೆ ಮತ್ತೊಬ್ಬರು ಸೇರ್ಪಡೆಯಾಗಿದ್ದು, ಪಠ್ಯಕ್ಕೆ ನೀಡಿದ್ದ ಅನುಮತಿಯನ್ನು ಲೇಖಕ ಚಂದ್ರಶೇಖರ ತಾಳ್ಯ ವಾಪಸ್ ಪಡೆದಿದ್ದಾರೆ. 6ನೇ ತರಗತಿಯ ಕನ್ನಡದಲ್ಲಿ ಚಂದ್ರಶೇಖರ ತಾಳ್ಯ ಬರೆದ ಒಂದು ಸೋಜಿಗದ ಪದ್ಯ ಎಂಬ ಪಾಠ ಹಾಕಲಾಗಿತ್ತು. ಇದೀಗ ಪಠ್ಯಕ್ಕೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆದಿದ್ದು, ಶಿಕ್ಷಣ ಸಚಿವ ನಾಗೇಶ್ ಅವರಿಗೆ ಪತ್ರ ಬರೆದಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆ ವಿವಾದ:ಹಂಪನಾ, ಎಸ್.ಜಿ ಸಿದ್ದರಾಮಯ್ಯ ಬಳಿಕ ಪ್ರೊ. ಕೆ.ಎಸ್ ಮಧುಸೂದನ್ ರಾಜೀನಾಮೆ ನೀಡಿದ್ದಾರೆ. ಪ್ರೊ.ಮಧುಸೂದನ್ 9 ನೇ ತರಗತಿ ತಿಳಿ ಕನ್ನಡ ಪಠ್ಯ ಪುಸ್ತಕ ರಚನಾ ಸಮಿತಿ ಅಧ್ಯಕ್ಷರಾಗಿದ್ದು, ರಾಜಿನಾಮೆ ಕುರಿತು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರು ಕುವೆಂಪು ಬಗ್ಗೆ ಲಘುವಾಗಿ ಗೇಲಿ ಮಾಡಿದ್ದಾರೆ. ಇದು ನನಗೆ ನೋವುಂಟು ಮಾಡಿದ್ದು ಪ್ರತಿಭಟನೆಯಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿರುತ್ತೇನೆ. ಪಠ್ಯದಲ್ಲಿ ನನ್ನ ಹೆಸರು ಹಾಗೂ ನಾನು ಬರೆದ ಪಾಠವನ್ನು ಮಾಡುವ ಪ್ರಸ್ತಾವನೆ ಸೇರಿಸಬಾರದೆಂದು ಮನವಿ ಮಾಡಿದ್ದಾರೆ.
ಅಮ್ಮನಾಗುವುದೆಂದರೆ ಕವಿತೆ ಕೈ ಬಿಡುವಂತೆ ರೂಪ ಹಾಸನ ಪತ್ರ ಅಮ್ಮನಾಗುವುದೆಂದರೆ ಕವಿತೆ ಕೈ ಬಿಡುವಂತೆ ರೂಪ ಹಾಸನ ಪತ್ರ:ಪರಿಷ್ಕೃತ 9ನೇ ತರಗತಿಯ ಪಠ್ಯದಿಂದ ಅಮ್ಮನಾಗುವುದೆಂದರೆ ಕವಿತೆ ಕೈ ಬಿಡುವಂತೆ ಲೇಖಕಿ ರೂಪ ಹಾಸನ ಸಚಿವ ನಾಗೇಶ್ ರಿಗೆ ಪತ್ರ ಬರೆದಿದ್ದಾರೆ. ಈ ವರ್ಷ ಶಾಲಾ ಪಠ್ಯಪುಸ್ತಕಗಳು ಆಳುವ ಪಕ್ಷದ ತತ್ವ, ಸಿದ್ಧಾಂತಕ್ಕೆ ಅನುಗುಣವಾಗಿ ಮರು ಪರಿಷ್ಕರಣೆಗೊಂಡಿರುವುದು ಖೇದನೀಯ. ಅದನ್ನು ಈಗಾಗಲೇ ಕೆಲವು ಹಿರಿಯ ಸಾಹಿತಿಗಳು ಖಂಡಿಸಿದ್ದಾರೆ. ಹಾಗೇ ಪಠ್ಯದಲ್ಲಿ ತಮ್ಮ ಬರಹವನ್ನು ಸೇರ್ಪಡೆಗೊಳಿಸಲು ಹಿಂದಿನ ಸಮಿತಿಗೆ ಕೊಟ್ಟ ಅನುಮತಿಯನ್ನು ಹಿಂಪಡೆಯುವ ಮೂಲಕ ತಮ್ಮ ನೈತಿಕ ಹಾಗೂ ಸಾತ್ವಿಕ ಪ್ರತಿರೋಧ ತೋರಿದ್ದಾರೆ.
ಅನುಮತಿ ಹಿಂಪಡೆದವರು ಯಾರೆಲ್ಲ?:
- ದೇವನೂರು ಮಹಾದೇವ
- ನಾಡೋಜ ಹಂಪ ನಾಗರಾಜಯ್ಯ
- ರೂಪ ಹಾಸನ
- ಮೂಡ್ನಾಕೂಡು ಚಿನ್ನಸ್ವಾಮಿ
- ಚಂದ್ರಶೇಖರ ತಾಳ್ಯ
- ಬೊಳುವಾರು ಮಹಮದ್ ಕುಂಇ್
- ಜಿ. ರಾಮಕೃಷ್ಣ
- ಎಸ್.ಜಿ ಸಿದ್ದರಾಮಯ್ಯ
- ಈರಪ್ಪ ಎಂ ಕಂಬಳಿ
- ಪ್ರೊ.ಮಧುಸೂದನ್
ಇದನ್ನೂ ಓದಿ:ರಾಜ್ಯಸಭೆ ಚುನಾವಣೆ: ನಮ್ಮ ಸ್ಟ್ರಾಟಜಿ ಏನು ಅನ್ನೋದನ್ನು ಬಹಿರಂಗಪಡಿಸಲು ಆಗೋದಿಲ್ಲ- ಪ್ರಹ್ಲಾದ್ ಜೋಶಿ