ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಸುಮಲತಾ ಅಂಬರೀಶ್ ಅವರು ಜೆಡಿಎಸ್ ಬೆಂಬಲ ಯಾಕೆ ಕೇಳಲಿಲ್ಲ, ದಳಪತಿಗಳನ್ನು ಯಾಕೆ ಸಂಪರ್ಕ ಮಾಡಲಿಲ್ಲ ಎನ್ನುವ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂಬರೀಶ್ ಅಗಲಿಕೆಯ ನಂತರ ಮಂಡ್ಯದಲ್ಲಿ ಶ್ರದ್ಧಾಂಜಲಿ ಸಭೆ ಮಾಡಿದ್ದೆವು, ಅದರಲ್ಲಿ ಜೆಡಿಎಸ್ ಕಡೆಯಿಂದ ಯಾವುದೇ ನಾಯಕರು ಬರಲಿಲ್ಲ. ಎಲ್ಲರೂ ಅಂಬಿ ಶ್ರದ್ಧಾಂಜಲಿ ಸಭೆಯನ್ನು ಬಹಿಷ್ಕರಿಸಿದ್ದರು. ಇದರಲ್ಲಿನ ರಾಜಕೀಯದ ಬಗ್ಗೆ ನನಗೆ ಮೊದಲು ಯೋಚನೆಯೇ ಇರಲಿಲ್ಲ, ಯಾಕೆ ಹೀಗೆ ಮಾಡಿದರು ಎಂಬ ಬೇಸರವಿತ್ತು. ಜನ ಕೂಡ ಬೇಸರವಾಗಿದ್ದರು ಎಂದು ಭಾವುಕರಾದರು.
ಸುಮಲತಾ ನಮ್ಮ ಪಕ್ಷದವರಲ್ಲ, ಅಂಬರೀಶ್ ಕಾಂಗ್ರೆಸ್ನಲ್ಲಿ ಇದ್ದವರು. ನಮ್ಮ ಪಕ್ಷಕ್ಕೆ ಯಾಕೆ ಅವರನ್ನು ಕರೆಯಬೇಕು? ಮಂಡ್ಯ ಜೆಡಿಎಸ್ ಭದ್ರಕೋಟೆ, ಇಲ್ಲಿ ನಮ್ಮ ಎಂಟು ಶಾಸಕರಿದ್ದಾರೆ. ಹಾಗಾಗಿ ಇಲ್ಲಿ ಯಾಕೆ ಸುಮಲತಾ ಅವರಿಗೆ ಬೆಂಬಲ ನೀಡಬೇಕು ಎನ್ನುವ ರೀತಿಯ ಹೇಳಿಕೆಯನ್ನು ಜೆಡಿಎಸ್ ನಾಯಕರು ನೀಡಿದ್ದನ್ನು ಮಾಧ್ಯಮಗಳ ಮೂಲಕ ನೋಡಿದೆ. ಹಾಗಾಗಿ ಮಂಡ್ಯದಿಂದ ಸ್ಪರ್ಧೆಗೆ ಅವಕಾಶ ನೀಡುವಂತೆ ಜೆಡಿಎಸ್ ನಾಯಕರನ್ನು ಸಂಪರ್ಕಿಸುವುದರಲ್ಲಿ ಅರ್ಥವಿಲ್ಲ ಎಂದು ನಿರ್ಧರಿಸಿದೆ ಎಂದು ತಿಳಿಸಿದರು.
ಚುನಾವಣೆಯಲ್ಲಿ ಗೆದ್ದ ನಂತರ ಯಾವ ಪಕ್ಷಕ್ಕೆ ಬೆಂಬಲ ನೀಡುತ್ತೀರಾ ಎನ್ನುವ ಪ್ರಶ್ನೆ ಅಪ್ರಸ್ತುತ. ಈಗಲೂ ಕೂಡ ಯಾವುದೇ ಪಕ್ಷ ನಮ್ಮೊಂದಿಗೆ ಅಂತಹ ಚರ್ಚೆ ನಡೆಸಿಲ್ಲ. ಈಗ ನಾನು ಸ್ಪರ್ಧೆ ಮಾಡುತ್ತಿರುವುದು ಮಂಡ್ಯ ಕ್ಷೇತ್ರದ ಜನರ ಅಭಿಪ್ರಾಯ ಕೇಳಿ. ಹಾಗೆಯೇ ಮುಂದೆ ಯಾರಿಗಾದರೂ ಬೆಂಬಲ ನೀಡಬೇಕು ಎನ್ನುವ ವಿಷಯ ಬಂದರೂ ಜನರ ಮುಂದೆ ಹೋಗುತ್ತೇನೆ. ಅವರು ಹೇಳಿದಂತೆಯೇ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.