ಕರ್ನಾಟಕ

karnataka

ETV Bharat / city

ಹಿಜಾಬ್, ಶಾಲು ಹಾಕೊಂಡ್​ ಬಂದ್ರೆ ನೋ ಎಂಟ್ರಿ.. ಕೋರ್ಟ್ ತೀರ್ಪು ಬರೋವರೆಗೂ ಸಮವಸ್ತ್ರ ಧರಿಸಿಯೇ ಬರಬೇಕು: ಶಿಕ್ಷಣ ಸಚಿವ

ಎಸ್​ಡಿಎಂಸಿಗಳು ತಮ್ಮ ಶಾಲೆಯಲ್ಲಿ ಶೈಕ್ಷಣಿಕ ವರ್ಷಕ್ಕೂ ಮೊದಲೇ ಸಮವಸ್ತ್ರ ರೂಪಿಸಿದ್ದರೋ, ಮಕ್ಕಳು ಇಲ್ಲಿಯವರೆಗೆ ಯಾವ ಸಮವಸ್ತ್ರ ಧರಿಸಿ ಬರುತ್ತಿದ್ದರೋ ಹೈಕೋರ್ಟ್​​ನಲ್ಲಿ ಪ್ರಕರಣದ ತೀರ್ಪು ಬರುವವರೆಗೂ ಅದೇ ಸಮವಸ್ತ್ರವನ್ನು ಧರಿಸಿಕೊಂಡು ಬರಬೇಕು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸೂಚಿಸಿದ್ದಾರೆ.

Education minister BC Nagesh
ಶಿಕ್ಷಣ ಸಚಿವ

By

Published : Feb 4, 2022, 4:36 PM IST

Updated : Feb 4, 2022, 4:59 PM IST

ಬೆಂಗಳೂರು: ಹೈಕೋರ್ಟ್ ತೀರ್ಪು ಬರುವವರೆಗೂ ಈಗ ಇರುವ ಸಮವಸ್ತ್ರ ನಿಯಮ ಪಾಲನೆ ಮಾಡಬೇಕು. ಹಿಜಾಬ್, ಕೇಸರಿ ಶಾಲು ಧರಿಸಿ ಶಾಲೆಗೆ ಬರಲು ಅವಕಾಶವಿಲ್ಲ, ಆ ರೀತಿ ಬಂದಲ್ಲಿ ಅವರನ್ನು ಶಾಲೆಗೆ ಸೇರಿಸದಂತೆ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಮುಖ್ಯಮಂತ್ರಿಗಳಿಗೆ ಹಿಜಾಬ್ ವಿಚಾರದಲ್ಲಿ ಕಾನೂನು ಇಲಾಖೆ, ಶಿಕ್ಷಣ ಇಲಾಖೆ ಸಲಹೆ ನೀಡಿದೆ. ಅಡ್ವೋಕೇಟ್ ಜನರಲ್ ಅಭಿಪ್ರಾಯ ಪಡೆದು ನ್ಯಾಯಾಲಯಕ್ಕೆ ಸರ್ಕಾರದ ನಿಲುವು ಏನು ಎನ್ನುವುದನ್ನು ತಿಳಿಸಲಾಗುತ್ತದೆ. ನಮ್ಮ ಕಾನೂನು ಇಲಾಖೆ ಕಾಯ್ದೆ ಮತ್ತು ನಿಯಮ ಏನು ಹೇಳಲಿದೆ ಎನ್ನುವ ವಿಚಾರವನ್ನು ನಮ್ಮೆಲ್ಲರಿಗೂ ತಿಳಿಸುವ ಪ್ರಯತ್ನವನ್ನು ಇಂದಿನ ಸಭೆಯಲ್ಲಿ ಮಾಡಲಾಗಿದೆ ಎಂದರು.

ಮಾಧ್ಯಮದವರೊಂದಿಗೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪ್ರತಿಕ್ರಿಯೆ

ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರ 2013 ಮತ್ತು 2018ರಲ್ಲಿ ಮಾಡಲಾಗಿರುವ ನಿಯಮದ ಪ್ರಕಾರ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ತನ್ನದೇ ಆದ ಸಮವಸ್ತ್ರ ರೂಪಿಸಿಕೊಳ್ಳುವ ಅಧಿಕಾರ ನೀಡಲಾಗಿದೆ. ಅದೇ ರೀತಿ ಆಯಾ ಶಾಲೆಗಳು ತಮ್ಮ ಸಮವಸ್ತ್ರ ರೂಪಿಸಿಕೊಳ್ಳಬಹುದಾಗಿದೆ. ಆದರೆ ಆ ಸಮವಸ್ತ್ರ ಕನಿಷ್ಠ ಐದು ವರ್ಷ ಇರಬೇಕು ಎನ್ನುವ ಷರತ್ತನ್ನು ವಿಧಿಸಲಾಗಿದೆ. ಇದೆಲ್ಲವನ್ನು ಪರಿಶೀಲಿಸಿ ಇನ್ನೆರಡು ದಿನಗಳಲ್ಲಿ ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ ಎಂದು ಸಚಿವರು ತಿಳಿಸಿದರು.

ಸದ್ಯಕ್ಕೆ ಇದನ್ನೇ ಆಧಾರವಾಗಿಟ್ಟುಕೊಂಡು ನಾವೀಗ ಸುತ್ತೋಲೆ ಹೊರಡಿಸಿದ್ದೇವೆ. ಇಲ್ಲಿಯವರೆಗೂ ಯಾವ ಎಸ್​ಡಿಎಂಸಿಗಳು ತಮ್ಮ ಶಾಲೆಯಲ್ಲಿ ಶೈಕ್ಷಣಿಕ ವರ್ಷಕ್ಕೂ ಮೊದಲೇ ಸಮವಸ್ತ್ರ ರೂಪಿಸಿದ್ದರೋ, ಮಕ್ಕಳು ಇಲ್ಲಿಯವರೆಗೆ ಯಾವ ಸಮವಸ್ತ್ರ ಧರಿಸಿ ಬರುತ್ತಿದ್ದರೋ ಹೈಕೋರ್ಟ್​ನಲ್ಲಿ ಪ್ರಕರಣದ ತೀರ್ಪು ಬರುವವರೆಗೂ ಅದೇ ಸಮವಸ್ತ್ರವನ್ನು ಧರಿಸಿಕೊಂಡು ಬರಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳಿಗೆ PSI ಖಡಕ್‌ ವಾರ್ನಿಂಗ್

ತಮ್ಮ ನಿಲುವುಗಳು ಮತ್ತು ಧಾರ್ಮಿಕ ನಿಲುವುಗಳನ್ನು ಶಿಕ್ಷಣ ಸಂಸ್ಥೆಗಳಲ್ಲಿ ಹೇರಲು ಯಾರಿಂದಲೂ ಸಾಧ್ಯವಿಲ್ಲ. ಮಕ್ಕಳು ತುಂಬಾ ಆಸಕ್ತಿಯಿಂದ ಶಾಲೆಗೆ ಬರುತ್ತಿದ್ದಾರೆ. ಮಕ್ಕಳು ಮತ್ತು ಪೋಷಕರು ಸಮವಸ್ತ್ರದ ಬಗ್ಗೆ ಸ್ಪಷ್ಟವಾಗಿ ಓದಿ ಸಹಿ ಮಾಡಿದ್ದಾರೆ. ಜನವರಿ ಮೊದಲ ವಾರದವರೆಗೂ ಎಲ್ಲರೂ ಕೂಡ ಸಮವಸ್ತ್ರ ನಿಯಮ ಪಾಲನೆ ಮಾಡುತ್ತಿದ್ದರು. ಇದಾದ ನಂತರ ಯಾರ ಕುಚೋದ್ಯಕ್ಕೆ ಒಳಗಾಗಿ ಈ ತರದ ಬಹಿಷ್ಕಾರಗಳನ್ನು ಮಾಡಿದ್ದಾರೋ ನಮಗೆ ತಿಳಿದಿಲ್ಲ. ಎಸ್​​ಎಂಸಿ ಅಧ್ಯಕ್ಷರು ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ಕಾಳಜಿ ಇಟ್ಟುಕೊಂಡಿರುವವರು. ರಘುಪತಿ ಭಟ್ ಅವರು ತಮ್ಮ ಕ್ಷೇತ್ರದಲ್ಲಿ ಎಲ್ಲ ಶಾಲೆಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಸರ್ಕಾರಿ ಶಾಲೆಯೊ ಖಾಸಗಿ ಶಾಲೆಯೋ ಎನ್ನುವ ರೀತಿ ಅಭಿವೃದ್ಧಿ ಮಾಡಿದ್ದಾರೆ ಎಂದು ಶಾಸಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬೇರೆ ಕಡೆ ಈ ರೀತಿಯ ಪರಿಸ್ಥಿತಿ ಬಾರದಂತೆ ನೋಡಿ ಕೊಳ್ಳಬೇಕು ಎಂದು ಎಲ್ಲಾ ಶಾಸಕರಿಗೂ ನಾನು ಮನವಿ ಮಾಡುತ್ತೇನೆ. ಶಾಲೆಯಲ್ಲಿ ಮಕ್ಕಳ ಶಿಕ್ಷಣ ಮುಂದುವರೆಯಲಿ. ಮಕ್ಕಳು ಶಿಕ್ಷಣ ವಂಚಿತರಾಗದಂತೆ ಕೆಲಸ ಮಾಡಬೇಕಿದೆ. ನಮ್ಮ ಕಾಯ್ದೆ ಮತ್ತು ನಿಯಮಗಳ ರೀತಿ ಮುಂದುವರೆಯಬೇಕು ಎಂದು ನಾಗೇಶ್​ ಕರೆ ನೀಡಿದರು.

ಈ ಹಿಂದೆಯೂ ಕೋರ್ಟ್​ ತೀರ್ಪು ನೀಡಿದೆ:ಈಗಾಗಲೇ ಅನೇಕ ನ್ಯಾಯಾಲಯಗಳು ಈ ವಿಚಾರವಾಗಿ ತೀರ್ಪು ಕೊಟ್ಟಿವೆ. ಕೇರಳ ಹೈಕೋರ್ಟ್, ಬಾಂಬೆ ಹೈಕೋರ್ಟ್, ಸುಪ್ರೀಂ ಕೋರ್ಟ್​ಗಳು ಕೂಡ ಸಮವಸ್ತ್ರದ ವಿಚಾರದಲ್ಲಿ ತೀರ್ಪು ನೀಡಿವೆ, ಶಾಲೆಗಳಿಗೆ ಸ್ಕಾರ್ಫ್ ಧರಿಸಿ ಬರುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಹಿಜಾಬ್, ಕೇಸರಿ ಶಾಲು ಯಾರೂ ಧರಿಸಿ ಬರಬಾರದು ಎಂದು ಮಕ್ಕಳಿಗೂ ಮನವಿ ಮಾಡುತ್ತೇನೆ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದ ರೀತಿಯ ವಾತಾವರಣ ಸೃಷ್ಟಿ ಮಾಡುವುದು ಬೇಡ. ಎರಡು ತಿಂಗಳಿನಲ್ಲಿ ಪರೀಕ್ಷೆಗಳು ಬರಲಿವೆ, ಇಂತಹ ವಾತಾವರಣದಿಂದ ಪರೀಕ್ಷೆ ಬರೆಯಲು ಮಕ್ಕಳಿಗೆ ಸಮಸ್ಯೆಯಾಗಲಿದೆ. ಇದನ್ನೆಲ್ಲಾ ಬಿಟ್ಟು ಬನ್ನಿ ಎಂದರು.

ಸಿದ್ದರಾಮಯ್ಯ ಸಾಕಷ್ಟು ತಿಳಿದವರು:ಸಿದ್ದರಾಮಯ್ಯ ಐದು ವರ್ಷ ಪೂರ್ಣ ಮುಖ್ಯಮಂತ್ರಿ ಆಗಿದ್ದವರು. ಸ್ವತಃ ವಕೀಲರು, ಸಂವಿಧಾನದ ಬಗ್ಗೆ ತುಂಬಾ ಆಳವಾಗಿ ಓದಿದ್ದಾರೆ. ಅವರು ಹಿಜಾಬ್ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸುಳ್ಳನ್ನ ಹೇಳುತ್ತಿದ್ದಾರೆ ಎಂದರೆ ನಮಗೆ ಸಿದ್ದರಾಮಯ್ಯ ಅವರ ಬಗ್ಗೆ ದುಃಖವಾಗಲಿದೆ. ಅವರು ಕೂಡ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಇಳಿದುಬಿಟ್ಟಿದ್ದಾರೋ ಅಥವಾ ಅವರ ಪಕ್ಷದಲ್ಲಿ ಸ್ಥಾನ ಉಳಿಸಿಕೊಳ್ಳಲು ಈ ರೀತಿ ಮಾತನಾಡಿದ್ದಾರೋ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಶಾಲೆಯಲ್ಲಿ ಹಿಜಾಬ್ ಧರಿಸುವುದನ್ನು ತಡೆಯುವುದು ಮೂಲಭೂತ ಹಕ್ಕಿನ ಉಲ್ಲಂಘನೆ: ಸಿದ್ದರಾಮಯ್ಯ ಕಿಡಿ

ಸಿದ್ದರಾಮಯ್ಯ ಅವರ ಕಾಲದಲ್ಲಿಯೇ ಶಿಕ್ಷಣ ಕಾಯ್ದೆಯಡಿ ಸಮವಸ್ತ್ರ ನಿಯಮ ರೂಪಿಸಲಾಗಿದೆ. ಕರ್ನಾಟಕ ಶಿಕ್ಷಣ ಕಾಯ್ದೆ ಮತ್ತು ನಿಯಮವನ್ನು ಓದಿ ಆ ನಿಯಮ ಏನು ಹೇಳುತ್ತದೆಯೋ ಅದನ್ನೇ ಅಲ್ಲಿ ಮಾಡಲಾಗಿದೆ. ಯಾರು ಸಮವಸ್ತ್ರದಲ್ಲಿ ಬರುತ್ತಾರೋ ಅವರನ್ನು ಮಾತ್ರ ಒಳಗಡೆ ಬಿಡಿ, ಸಮವಸ್ತ್ರವಿಲ್ಲದೆ ಯಾರು ಬರುತ್ತಾರೋ ಅವರು ಶಿಕ್ಷಣ ಸಂಸ್ಥೆಗೆ ಬರಲು ಸಾಧ್ಯವಿಲ್ಲ ಎಂದು ಈಗಾಗಲೇ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ. ಈ ಸಂಬಂಧ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ಈಗ ಮತ್ತೊಂದು ಸುತ್ತೋಲೆ ಹೊರಡಿಸಿ ಶಿಕ್ಷಣ ಕಾಯ್ದೆ ಮತ್ತು ನಿಯಮದ ಬಗ್ಗೆ ತಿಳಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಕೆಲವು ವ್ಯಕ್ತಿಗಳ ಷಡ್ಯಂತ್ರ:ಹಿಜಾಬ್ ವಿಚಾರದ ವಿವಾದದಲ್ಲಿ ಹೊರಗಡೆಯವರ ಕೈವಾಡವಿದೆ ಎನ್ನುವ ಯುಟಿ ಖಾದರ್ ಮಾತಿನಲ್ಲಿ ಅರ್ಥವಿದೆ. ಹೊರಗಡೆಯವರು ಬಂದಿದ್ದಾರೆ. ಇದನ್ನ ಅಂತಾರಾಷ್ಟ್ರೀಯ ಸುದ್ದಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಹಿಂದೆ ಕಾಣದ ಶಕ್ತಿಯ ಕೈವಾಡವಿದೆ. ಅನೇಕ ದೇಶಗಳಲ್ಲಿ ಹಿಜಾಬ್ ಬ್ಯಾನ್ ಮಾಡಿದ್ದಾರೆ. ಅಲ್ಲೆಲ್ಲೂ ಸುದ್ದಿಯಾಗಿಲ್ಲ ಆದರೆ ಆರು ಹುಡುಗಿಯರ ವಿಷಯವನ್ನು ಅಂತಾರಾಷ್ಟ್ರೀಯ ಸುದ್ದಿ ಮಾಡುತ್ತಾರೆ ಎಂದರೆ ಈ ದೇಶದ ವಿರುದ್ಧ ಇರುವ ಕೆಲವು ವ್ಯಕ್ತಿಗಳು ಒಂದು ರೀತಿಯ ಷಡ್ಯಂತ್ರ ಮಾಡುತ್ತಿದ್ದಾರೆ ಎಂದೇ ಅರ್ಥ. ಜಗತ್ತಿನಲ್ಲಿ ಭಾರತಕ್ಕೆ ಸಿಗುತ್ತಿರುವ ಬೆಲೆ, ಪ್ರಧಾನಿಗೆ ಸಿಗುತ್ತಿರುವ ಗೌರವವನ್ನು ಸಹಿಸದೆ ಪ್ರಪಂಚದಲ್ಲಿ ಈ ರೀತಿಯ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಈ ಹಿಂದೆ ಕೇಸರಿ ಶಾಲು ಹಾಕಿಕೊಂಡು ಬಂದಾಗಲೂ ಸರ್ಕಾರ ಇದೆ ನಿರ್ಧಾರವನ್ನು ತೆಗೆದುಕೊಂಡಿದೆ. ಈಗಲೂ ಅದೇ ನಿಲುವು ನಮ್ಮದು. ಈಗಾಗಲೇ ಕೆಲ ಮಕ್ಕಳ ಜೊತೆ ದೂರವಾಣಿಯಲ್ಲಿಯೂ ಮಾತುಕತೆ ನಡೆಸಿದ್ದೇನೆ. ಅವಶ್ಯಕತೆ ಬಿದ್ದರೆ ಮುಂದಿನ ದಿನಗಳಲ್ಲಿ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ಸಚಿವರು ಹೇಳಿದರು.

Last Updated : Feb 4, 2022, 4:59 PM IST

ABOUT THE AUTHOR

...view details