ಬೆಂಗಳೂರು: ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿಯವರ ನಿಧನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಕಂಬನಿ ಮಿಡಿದಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಪ್ರಣಬ್ ಮುಖರ್ಜಿಯವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ನಿಧನರಾದ ಹಿನ್ನೆಲೆ ರಾಜ್ಯ ಕಾಂಗ್ರೆಸ್ ನಾಯಕರು ದೇಶಕ್ಕೆ ಪ್ರಣಬ್ ಮುಖರ್ಜಿಯವರು ನೀಡಿದ ಕೊಡುಗೆಗಳನ್ನು ಸ್ಮರಿಸಿದ್ದಾರೆ.
ಈ ಕುರಿತು ಟ್ಟೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ದೇಶದ ಮಾಜಿ ರಾಷ್ಟ್ರಪತಿಗಳು ಹಾಗೂ ಭಾರತರತ್ನ ಪುರಸ್ಕೃತರಾದ ಪ್ರಣಬ್ ಮುಖರ್ಜಿ ನಿಧನ ತೀವ್ರ ದುಃಖ ತಂದಿದೆ. ಅವರ ಕುಟುಂಬ ಹಾಗೂ ಅಸಂಖ್ಯಾತ ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ನಮ್ಮ ಇತಿಹಾಸ, ಸಂವಿಧಾನ ಮತ್ತು ಕಾನೂನು ಜ್ಞಾನವನ್ನು ಅಪಾರವಾಗಿ ಸಂಪಾದಿಸಿದ ದೇಶದ ಒಬ್ಬ ರಾಜಕಾರಣಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸಂತಾಪ ಸೂಚಿಸಿದ್ದಾರೆ.
ಅಲ್ಲದೆ, ಸುಮಾರು 5 ದಶಕಗಳ ಕಾಲ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗಿಯಾಗಿ ಸೇವೆ ಸಲ್ಲಿಸಿದ ಮಹಾನ್ ನಾಯಕ. ಯುಪಿಎ ಸರ್ಕಾರದಲ್ಲಿ ಪ್ರಮುಖ ಸಚಿವಾಲಯದ ಹುದ್ದೆ ಅಲಂಕರಿಸಿ, ನಂತರ ದೇಶದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ಗಾಂಧಿ ಅವರ ಚಿಂತನೆಯನ್ನು ಅಳವಡಿಸಿಕೊಂಡಿದ್ದ ಪ್ರಣಬ್ ಮುಖರ್ಜಿ ಅವರನ್ನು 'Man for All Seasons' ಎಂದೇ ಬಣ್ಣಿಸಲಾಗುತ್ತಿತ್ತು. ದೇಶದ ಇತಿಹಾಸ, ಸಂವಿಧಾನ ಹಾಗೂ ಕಾನೂನಿನ ಬಗ್ಗೆ ಅಪಾರವಾದ ಜ್ಞಾನ ಹೊಂದಿದ್ದ ಮಹಾನ್ ನಾಯಕನನ್ನು ನಾವಿಂದು ಕಳೆದುಕೊಂಡಿದ್ದೇವೆ ಎಂದು ಸ್ಮರಿಸಿದರು.
ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ದೇಶದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರೊಂದಿಗೆ ಕಾರ್ಯ ನಿರ್ವಹಿಸುವ ಗೌರವ ನನಗೆ ಲಭಿಸಿತ್ತು. ರಾಷ್ಟ್ರದ ಬಗೆಗಿನ ಅವರ ಬದ್ಧತೆಗೆ ಸಾಟಿಯಿಲ್ಲ. ದೇಶ ಕಂಡ ಅತ್ಯಂತ ಶ್ರೇಷ್ಠ ರಾಜಕಾರಣಿ ಮತ್ತು ಚಿಂತಕರು ಇವರಾಗಿದ್ದು, ಇಂತಹ ಮಹಾನ್ ನಾಯಕರನ್ನು ದೇಶ ಕಳೆದುಕೊಂಡಿದೆ. ಅವರ ಕುಟುಂಬ ಸದಸ್ಯರು ಮತ್ತು ಪ್ರೀತಿಪಾತ್ರರಿಗೆ ನನ್ನ ಹೃದಯಪೂರ್ವಕ ಸಾಂತ್ವನ ಸಲ್ಲಿಸಲು ಬಯಸುತ್ತೇನೆ ಎಂದು ಟ್ಟೀಟ್ ಮಾಡಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಟ್ಟೀಟ್ ಮಾಡಿ, ಮಾಜಿ ರಾಷ್ಟ್ರಪತಿಗಳು, ಕೇಂದ್ರದ ಮಾಜಿ ಸಚಿವರು ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪ್ರಣಬ್ ಮುಖರ್ಜಿ ಅವರ ನಿಧನದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ. ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳ ಖಾತೆಗಳ ಸಚಿವರಾಗಿ ಅವರು ಮಾಡಿರುವ ಸಾಧನೆಗೆ ದೇಶ ಸದಾ ಋಣಿಯಾಗಿದೆ. ಅವರ ಕುಟುಂಬ ಮತ್ತು ಬಂಧು ಮಿತ್ರರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದಿದ್ದಾರೆ.
ರಾಜ್ಯಸಭೆ ಸದಸ್ಯ ಜಿ ಸಿ ಚಂದ್ರಶೇಖರ್ ಅವರು, ಭಾರತ ರತ್ನ ಶ್ರೀ ಪ್ರಣಬ್ ಮುಖರ್ಜಿ ಅವರು ಇನ್ನಿಲ್ಲ ಎಂಬ ಸುದ್ದಿ ಕೇಳಿ ಆಘಾತವಾಗಿದೆ. ಭಗವಂತನು ಅವರ ಆತ್ಮಕ್ಕೆ ಸದ್ಗತಿ ಉಂಟುಮಾಡಲಿ, ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಟ್ಟೀಟ್ ಮಾಡಿ ಸಂತಾಪ ಸೂಚಿಸಿದರು.
ಭಾರತದ ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ದುಃಖಿತ ಕುಟುಂಬ ಮತ್ತು ಅವರ ಅನುಯಾಯಿಗಳಿಗೆ ನನ್ನ ಸಂತಾಪಗಳು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟ್ಟೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಇವರಲ್ಲದೆ ಮಾಜಿ ಡಿಸಿಎಂ ಜಿ. ಪರಮೇಶ್ವರ್, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಎಂ. ಬಿ. ಪಾಟೀಲ್, ಆರ್. ವಿ. ದೇಶಪಾಂಡೆ ಸೇರಿದಂತೆ ಹಲವು ರಾಜ್ಯ ಕಾಂಗ್ರೆಸ್ ನಾಯಕರು ಮಾಜಿ ರಾಷ್ಟ್ರಪತಿಗಳ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.