ಕರ್ನಾಟಕ

karnataka

ETV Bharat / city

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಳೆ ಸಚಿವಾಲಯದ ನೌಕರರ ಸಂಘದ ವತಿಯಿಂದ ಮೌನ ಪ್ರತಿಭಟನೆ - Ministry Employees demands

ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ ನಾಳೆ ಮೌನ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

Silent protest by the Ministry Employees union on tomorrow
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಳೆ ಸಚಿವಾಲಯದ ನೌಕರರ ಸಂಘದ ವತಿಯಿಂದ ಮೌನ ಪ್ರತಿಭಟನೆ

By

Published : Feb 23, 2022, 5:11 PM IST

ಬೆಂಗಳೂರು: ಸಚಿವಾಲಯದಲ್ಲಿನ ಕಿರಿಯ ಸಹಾಯಕ ಹುದ್ದೆಗಳನ್ನು ಕಡಿತಗೊಳಿಸುವ ಪ್ರಸ್ತಾವನೆಯನ್ನು ಕೈಬಿಡಬೇಕು ಮತ್ತು ಸಚಿವಾಲಯದಲ್ಲಿ ಹೊರಗುತ್ತಿಗೆ ಸೇವೆಯನ್ನು ರದ್ದುಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ ನಾಳೆ ಮೌನ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಈ ಕುರಿತು ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ಸರ್ಕಾರ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ಅವರು, ನಾಳೆ ಮಧ್ಯಾಹ್ನ 1.30ಕ್ಕೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಮೌನ‌ ಪ್ರತಿಭಟನೆಗೆ ನಿರ್ಧರಿಸಲಾಗಿದ್ದು, ಸುಮಾರು ನಾಲ್ಕು ಸಾವಿರ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಚಿವಾಲಯದ ನೌಕರರ ಬಹು ದಿನಗಳ ಬೇಡಿಕೆಯನ್ನು ಕಂಡು ಕಾಣದಂತಿರುವ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಚಿವಾಲಯದವರಿಗೆ ದುರುದ್ದೇಶಪೂರಕವಾಗಿ ತಹಶೀಲ್ದಾರರಾಗುವ ಅವಕಾಶವನ್ನು ಸರ್ಕಾರ ತಪ್ಪಿಸಿದೆ.

ಇಲಾಖೆಗಳನ್ನು ವಿಲೀನಗೊಳಿಸುವ ನೆಪದಲ್ಲಿ ಸಚಿವಾಲಯದ ನೌಕರರಿಗೆ ಇದೀಗ ಅನ್ಯಾಯ ಮಾಡಲು ಹೊರಟಿದೆ. ಕಿರಿಯ ಸಹಾಯಕರ ಹುದ್ದೆಯನ್ನು ರದ್ದು ಮಾಡಲು ಉದ್ದೇಶಿಸಿರುವ ಸರ್ಕಾರದ ಈ ಕ್ರಮವನ್ನು ಖಂಡಿಸುತ್ತೇವೆ ಎಂದರು.

ಸಚಿವಾಲಯ ಬಂದ್ ಮಾಡುವ ಎಚ್ಚರಿಕೆ :ನಮ್ಮ ಮನವಿಯನ್ನು ಸರ್ಕಾರ ಸ್ವೀಕರಿಸಿದರೂ ಈವರೆಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಮ್ಮನ್ನು ಕರೆಸಿ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನವನ್ನು ಮಾಡಿಲ್ಲ. ಹೀಗಾಗಿ, ಅನಿವಾರ್ಯವಾಗಿ ಈಗ ಅಧಿವೇಶನದ ಬಳಿಕ ನಾಳೆಯಿಂದ ಮೌನ ಪ್ರತಿಭಟನೆ ಮಾಡಲು ಉದ್ದೇಶಿಸಲಾಗಿದೆ. ನಮ್ಮ ಬೇಡಿಕೆ ಈಡೇರದಿದ್ದರೆ ಹಂತ ಹಂತವಾಗಿ ಸಚಿವಾಲಯ ಬಂದ್ ಮಾಡುವ ಬಗ್ಗೆಯೂ ತೀರ್ಮಾನಿಸಲಾಗಿದೆ ಎಂದು ಎಚ್ಚರಿಕೆ ನೀಡಿದರು.

ಸಚಿವಾಲಯದಲ್ಲಿನ ಗ್ರೂಪ್ ಡಿ ಮತ್ತು ವಾಹನ ಚಾಲಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕು. ಸಚಿವಾಲಯದಲ್ಲಿನ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಸಚಿವಾಲಯದಲ್ಲಿ ಕಿರಿಯ ಸಹಾಯಕ ಹುದ್ದೆಗಳ ಅವಶ್ಯಕತೆಯ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಪೂರಕ ವರದಿ ನೀಡಿದ್ದರೂ ಈ ವರದಿಯನ್ನು ಪರಿಗಣಿಸದೇ, ಸಚಿವ ಸಂಪುಟ ಉಪಸಮಿತಿಯು ಅವೈಜ್ಞಾನಿಕವಾಗಿ ಕಿರಿಯ ಸಹಾಯಕ ಹುದ್ದೆಗಳನ್ನು ರದ್ದುಗೊಳಿಸಲು ಹೊರಟಿರುವುದನ್ನು ನಾವು ವಿರೋಧಿಸುತ್ತೇವೆ ಎಂದರು.

ಸರ್ಕಾರವು ಪ್ರಥಮ ಉದ್ಯೋಗದಾತನಾಗಿದ್ದು, ಸರ್ಕಾರವು ಸಾಮಾಜಿಕವಾಗಿ, ಆರ್ಥಿಕವಾಗಿ, ದುರ್ಬಲರಾಗಿರುವವರಿಗೆ ಉದ್ಯೋಗ ಒದಗಿಸುವ ಮೂಲಕ ಭದ್ರತೆ ನೀಡುವ ಸಂವಿಧಾನಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಹಾಗಾಗಿ ಸಾಮಾಜಿಕ ನ್ಯಾಯ ಒದಗಿಸುವ ಸರ್ಕಾರದ ಕೆಳ ಹಂತದ ಹುದ್ದೆಗಳನ್ನು ರದ್ದುಗೊಳಿಸುವ ಕ್ರಮದಿಂದ ಹಿಂದೆ ಸರಿಯುವಂತೆ ಆಗ್ರಹಿಸಿದರು.

ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ರಚಿಸಿ, ಆಯೋಗದ ಅಧ್ಯಕ್ಷರನ್ನಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರನ್ನು ನೇಮಿಸಿರುತ್ತದೆ. ಈ ಆಯೋಗವು ಹಾರನಹಳ್ಳಿ ರಾಮಸ್ವಾಮಿ ಅವರ ಶಿಫಾರಸುಗಳನ್ನು ಅನುಷ್ಠಾನಗೊಳಿಸಿರುವ ಬಗ್ಗೆ ಅಥವಾ ಅನುಷ್ಠಾನಗೊಳಿಸುವಂತೆ ಸುಮಾರು 2.75 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇರುವ ಪ್ರಸ್ತುತ ಸಮಯದಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯ ಸೇರಿದಂತೆ ಎಲ್ಲಾ ಇಲಾಖೆಗಳಿಗೆ ಪತ್ರ ಬರೆಯುವುದರ ಮೂಲಕ ಒತ್ತಡ ಹಾಕುತ್ತಿರುವುದು ವಿಷಾದನೀಯ.

ಅದರಲ್ಲಿ ಸಚಿವಾಲಯಕ್ಕೆ ಮಾರಕವಾದ ಕೆಲವು ಶಿಫಾರಸುಗಳು ಈ ಕೆಳಕಂಡಂತಿವೆ:

  • ಸಚಿವಾಲಯಕ್ಕೆ ಎಲ್ಲಾ ನೇಮಕಾತಿಗಳನ್ನು (ಸಹಾಯಕರು, ಶೀಘ್ರಲಿಪಿಗಾರರು, ಕಿರಿಯ ಸಹಾಯಕರು, ಬೆರಳಚ್ಚುಗಾರ, ವಾಹನ ಚಾಲಕರು ಹಾಗೂ ಡಿ-ಗ್ರೂಪ್) ತಡೆಹಿಡಿಯುವುದು/ ರದ್ದುಗೊಳಿಸಲು ಶಿಫಾರಸ್ಸು ಮಾಡಿರುವುದು.
  • ಪೀಠಾಧಿಕಾರಿ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿ ಮಾಡುವುದರ ಮೂಲಕ ಸರ್ಕಾರದ ಅಧೀನ ಕಾರ್ಯದರ್ಶಿ ಹುದ್ದೆಯನ್ನು ಕೈಬಿಡುವಂತೆ ಶಿಫಾರಸು ಮಾಡಿರುವುದು.
  • ಸ್ವೀಕೃತಿ ಮತ್ತು ರವಾನೆ ಶಾಖೆಗಳನ್ನು ಹಿರಿಯ ಸಹಾಯಕರೊಬ್ಬರಿಂದಲೇ ನಿರ್ವಹಿಸಲು ಶಿಫಾರಸು ಮಾಡಿರುವುದು.
  • ಕಾನೂನು ಕೋಶದ ಶಾಖೆಗಳನ್ನು ರದ್ದುಗೊಳಿಸಲು ಶಿಫಾರಸು ಮಾಡಿರುವುದು.
  • ಸಚಿವಾಲಯ ವ್ಯವಸ್ಥೆಯನ್ನು ಅಧಿಕಾರಿ ಆಧಾರಿತ ಸಚಿವಾಲಯವಾಗಿ ಮಾರ್ಪಾಡಿಸಲು ಶಿಫಾರಸು ಮಾಡಿರುವುದು.
  • ಸಚಿವಾಲಯ ತರಬೇತಿ ಸಂಸ್ಥೆಯನ್ನು ರದ್ದುಪಡಿಸಲು ಶಿಫಾರಸು ಮಾಡಿರುವುದು.
  • ಸಾಮಾನ್ಯ ರವಾನೆ ವಿಭಾಗವನ್ನು ರದ್ದುಪಡಿಸಲು ಶಿಫಾರಸು ಮಾಡಿರುವುದು.
  • ಗ್ರೂಪ್-ಡಿ ಮತ್ತು ವಾಹನ ಚಾಲಕರು ಮುಂತಾದ ಕೆಲವು ಹುದ್ದೆಗಳಿಗೆ ಗುತ್ತಿಗೆ ನೇಮಕಾತಿ ಮಾಡಲು ಶಿಫಾರಸು ಮಾಡಿರುವುದು.
  • ಅನುಕಂಪ ಆಧಾರಿತ ನೇಮಕಾತಿಗಳನ್ನು ಮೃತರಾದ ಪೊಲೀಸರ ಹಾಗೂ ದೊಂಬಿಗಳಲ್ಲಿ ಮೃತರಾದ ನೌಕರರ ಕುಟುಂಬಗಳಿಗೆ ಮಾತ್ರ ಸೀಮಿತಗೊಳಿಸಲು ಶಿಫಾರಸು ಮಾಡಿರುವುದು.

ಬಂಧುಗಳೇ, ಸಚಿವಾಲಯವು ರಾಜ್ಯ ಸರ್ಕಾರದ ಆಡಳಿತದ ಕೇಂದ್ರ ಬಿಂದುವಾಗಿದೆ. ಸರ್ಕಾರದ ಜನಪರ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ನೀತಿ ನಿರ್ಣಯಗಳನ್ನು ರೂಪಿಸುವಲ್ಲಿ ಸಚಿವಾಲಯವು ಪ್ರಮುಖ ಪಾತ್ರ ವಹಿಸುತ್ತಿದೆ. ಇಲ್ಲಿನ ಪಾರದರ್ಶಕ ಆಡಳಿತವು ಒಟ್ಟು ಆಡಳಿತ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಉಂಟುಮಾಡುತ್ತದೆ.

ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಮುಂದಾಲೋಚನೆಯಿಲ್ಲದೇ ಸಚಿವಾಲಯದ ಸಂರಚನೆಯನ್ನು ಶಿಥಿಲಗೊಳಿಸುವ ನಿಟ್ಟಿನಲ್ಲಿ ಉಪಕ್ರಮಗಳನ್ನು ಕೈಗೊಳ್ಳುತ್ತಿರುವುದು ವಿಪರ್ಯಾಸವಾಗಿದ್ದು, ಮೊದಲಿಗೆ ಸರ್ಕಾರವು ಸಚಿವಾಲಯದ ಈ ಕೆಳಕಂಡ ಪ್ರಸ್ತುತ ಸಮಸ್ಯೆಗಳನ್ನು ಪರಿಹರಿಸಬೇಕಾಗಿರುತ್ತದೆ.

ಇದನ್ನೂ ಓದಿ:ಕಾರಾಗೃಹಗಳಲ್ಲಿ ಗಾಂಜಾ ಬಳಕೆ ಆರೋಪ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಸದರಿ ಸಮಸ್ಯೆಗಳನ್ನು ಪರಿಹರಿಸದೇ ಸಚಿವ ಸಂಪುಟದ ಉಪಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಮುಂದಾಗಿರುವ ಸರ್ಕಾರದ ಇಂತಹ ನೌಕರ ವಿರೋಧಿ ಕ್ರಮಗಳನ್ನು ಸಂಘವು ಉಗ್ರವಾಗಿ ಖಂಡಿಸುತ್ತದೆ ಮತ್ತು ಸಂಘದ ಅಭಿಪ್ರಾಯಗಳನ್ನು ಪರಿಗಣಿಸದೇ ಸಚಿವ ಸಂಪುಟ ಉಪಸಮಿತಿಯ ಶಿಫಾರಸುಗಳನ್ನು ಜಾರಿ ಮಾಡಲು ಮುಂದಾದಲ್ಲಿ ಸಚಿವಾಲಯ ಬಂದ್ ಮಾಡುವುದು ಅನಿವಾರ್ಯವಾಗುತ್ತದೆ. ಇದಕ್ಕೆ ಸಮಸ್ತ ಸಚಿವಾಲಯ ಅಧಿಕಾರಿ ನೌಕರರು ಮಾನಸಿಕವಾಗಿ ಸಿದ್ಧರಾಗಿರುವಂತೆ ಕರೆ ನೀಡಿದರು.

ಬೇಡಿಕೆಗಳು :

  • ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು.
  • ಸಚಿವಾಲಯದಲ್ಲಿ ಅವಧಿ ಮೀರಿದ ನಿಯೋಜನೆ/ಅನ್ಯಕಾರ್ಯ ನಿಮಿತ್ತ ಕಾರ್ಯ ನಿರ್ವಹಿಸುತ್ತಿರುವವರನ್ನು ಮಾತೃ ಇಲಾಖೆಗೆ ಹಿಂದಿರುಗಿಸುವುದು.
  • ರಾಜ್ಯ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತಿಯಾದ ಅಧಿಕಾರಿ, ನೌಕರರನ್ನು ಗುತ್ತಿಗೆ ಆಧಾರದ ಮೇಲೆ ಸಚಿವಾಲಯದಲ್ಲಿ ಪುನರ್ ನೇಮಕ ಮಾಡಿಕೊಳ್ಳುತ್ತಿರುವುದನ್ನು ಕೈಬಿಡಬೇಕು.
  • ಸಚಿವಾಲಯದ ಇಲಾಖೆಗಳಲ್ಲಿ ಗ್ರೂಪ್-ಡಿ, ದತ್ತಾಂಶ ನಮೂದಕರನ್ನೊಳಗೊಂಡಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಭರ್ತಿ ಮಾಡಿದ ಅಧಿಕಾರಿ/ನೌಕರರನ್ನು ಹೊರತುಪಡಿಸಿ ಕ್ಷೇತ್ರ ಇಲಾಖೆಗಳಿಂದ ಹೊರಗುತ್ತಿಗೆ ಮುಖಾಂತರ ನೇಮಕ ಮಾಡಿಕೊಂಡು ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಈ ಕೂಡಲೇ ಹಿಂದಿರುಗಿಸುವುದು.
  • ಆಡಳಿತ ಸುಧಾರಣೆ ಹೆಸರಿನಲ್ಲಿ ಸಚಿವಾಲಯದ ಯಾವುದೇ ಇಲಾಖೆ, ಹುದ್ದೆಗಳ ಕಡಿತ / ಮರು ಹೊಂದಾಣಿಕೆ ಮಾಡುವ ಪ್ರಸ್ತಾವನೆಯನ್ನು ಕೈಬಿಡಬೇಕು.
  • ಸಚಿವಾಲಯದ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಇರುವ ಎನ್ನೇಡರ್‌ ಹುದ್ದೆಗಳಿಗೆ ನೇರವಾಗಿ ಸಚಿವಾಲಯದ ಇತರೆ ಇಲಾಖೆಗಳೇ ಭರ್ತಿ ಮಾಡುತ್ತಿರುವುದನ್ನು ಕೈಬಿಡುವ ಬಗ್ಗೆ.
  • ಸಚಿವರ ಆಪ್ತ ಶಾಖೆಗಳಿಗೆ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ನೌಕರರನ್ನು ಮಾತ್ರ ಕಡ್ಡಾಯವಾಗಿ ನೇಮಿಸಿಕೊಳ್ಳಬೇಕು.

ABOUT THE AUTHOR

...view details