ಬೆಂಗಳೂರು: ಭೂ ಸುಧಾರಣಾ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿ ಕುರಿತಂತೆ ವಿವಿಧ ದಲಿತ ಸಂಘಟನೆಗಳ ಜೊತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದರು.
ಕಾಯ್ದೆ ಜಾರಿಯಿಂದ ಕೃಷಿಕರಿಗೆ ಎದುರಾಗುವ ಸಮಸ್ಯೆಗಳ ಕುರಿತು ಕೂಲಂಕಷವಾಗಿ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟ ಮಾಡುವ ನಿರ್ಧಾರಕ್ಕೆ ಬರಲಾಯಿತು. ಸಭೆ ಮುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೃಷಿಕರ ನೆರವಿಗಾಗಿ ದೇವರಾಜು ಅರಸು ಸರ್ಕಾರದಲ್ಲಿ ಹೊಸದಾಗಿ ಭೂ ಸುಧಾರಣೆ ಕಾಯ್ದೆ ಜಾರಿ ತಂದು ಉಳುವವನೆ ಭೂ ಒಡೆಯ ಎಂದು ಕಾನೂನು ರೂಪಿಸಲಾಗಿತ್ತು. ಜಮೀನ್ದಾರಿ ಪದ್ಧತಿಯಿಂದ ಸಿಲುಕಿದ್ದ ಲಕ್ಷಾಂತರ ರೈತರಿಗೆ ಈ ಯೋಜನೆ ವರವಾಗಿತ್ತು. ರೈತರ ಹಿತ ಗಮನದಲ್ಲಿಟ್ಟುಕೊಳ್ಳದೆ ರಾಜ್ಯ ಸರ್ಕಾರ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ಕಾಯ್ದೆಗೆ ತಿದ್ದುಪಡಿ ತಂದಿದೆ.
ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರುದ್ಧ ಸಿದ್ದರಾಮಯ್ಯ ಕಿಡಿ ಕಾಯ್ದೆಯ ಸೆಕ್ಷನ್ 79 ಪ್ರಕಾರ ಉಳುವವನೇ ಭೂಮಿ ಒಡೆಯ ಎಂಬ ನಿಯಮ ಜಾರಿಯಾಗಿತ್ತು. ಇದರಿಂದ ಕೃಷಿಕರು ಮಾತ್ರ ಭೂಮಿ ಖರೀದಿಸಲು ಸಾಧ್ಯವಾಗಿತ್ತು. ಸದ್ಯ ತಿದ್ದುಪಡಿಯಿಂದ ಕೃಷಿಯೇತರ ವ್ಯಕ್ತಿಗಳು ಸಹ ರೈತರ ಭೂಮಿ ಖರೀದಿಗೆ ಸರ್ಕಾರ ಅವಕಾಶ ನೀಡಿದೆ. ಈ ಕಾಯ್ದೆ ಜಾರಿಯಾದರೆ ಮುಂದಿನ ದಿನಗಳಲ್ಲಿ ಉಳುವವನೇ ಭೂ ಒಡೆಯ ಬದಲು, ಉಳ್ಳವನೇ ಭೂ ಒಡೆಯ ಎಂಬಂತೆ ಆಗಲಿದೆ. ಕಾಯ್ದೆಯ ಮೂಲ ಉದ್ದೇಶವನ್ನೇ ಕಿತ್ತುಕೊಂಡಿದೆ ಎಂದು ಟೀಕಿಸಿದರು.
ತಿದ್ದುಪಡಿ ಕಾಯ್ದೆ ಜಾರಿಯಾದರೆ ಹಳ್ಳಿಗಾಡಿನ ಜನರ ಆರ್ಥಿಕ ಪರಿಸ್ಥಿತಿ ಬುಡಮೇಲಾಗಲಿದೆ. ತಳ ಸಮುದಾಯಗಳ ಸಾಮಾಜಿಕ ನ್ಯಾಯಕ್ಕೆ ಕೊಡಲಿಪೆಟ್ಟು ಬೀಳಲಿದೆ. ಹೀಗಾಗಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೊಡ್ಡಮಟ್ಟದಲ್ಲಿ ಚಳವಳಿ ಮಾಡಲು ಮುಂದಾಗಿದ್ದೇವೆ. ಈ ಬಗ್ಗೆ ಸೋಮವಾರ ಪಕ್ಷದ ನಾಯಕರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಸತ್ಯವಂತರು ಎಂದು ನಿರೂಪಿಸಿಕೊಳ್ಳಿ:
ವೈದ್ಯಕೀಯ ಉಪಕರಣ ಖರೀದಿ ಸಂಬಂಧಿಸಿದಂತೆ ಸಿದ್ದರಾಮಯ್ಯನವರು ಸರ್ಕಾರಕ್ಕೆ ಸಲಹೆ ಸೂಚನೆ ನೀಡಲಿ. ಅದು ಬಿಟ್ಟು ನ್ಯಾಯಾಂಗ ತನಿಖೆಗೆ ಒಳಪಡಿಸಲಿ ಎಂದು ಆದೇಶಿಸುವುದು ಸರಿಯಲ್ಲ ಎಂದು ಸಚಿವ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಡಿಮ್ಯಾಂಡ್ ಮಾಡುವ ಹಕ್ಕನ್ನು ರಾಜ್ಯ ಸರ್ಕಾರ ಕಿತ್ತುಕೊಂಡಿದೆಯಾ? ಸತ್ಯ ಹೇಳುವವರು ನೀವಾಗಿದ್ದರೆ ತನಿಖೆ ಮಾಡಿಸಿ. ಸತ್ಯವಂತರು ಎಂದು ನಿರೂಪಿಸಿಕೊಳ್ಳಿ. ಅದು ಬಿಟ್ಟು ಭಂಡತನದಿಂದ ಮಾತನಾಡಬೇಡಿ ಎಂದು ತಿರುಗೇಟು ನೀಡಿದರು.
ಹಾದಿ ಬೀದಿಯಲ್ಲಿ ಲೆಕ್ಕ ಕೇಳುವುದು ಸರಿಯಲ್ಲ ಎಂಬ ಮಾಜಿ ಶಾಸಕ ಹೆಚ್. ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಧಿವೇಶನ ಕರೆದರೆ ಈ ಬಗ್ಗೆ ಪ್ರಶ್ನಿಸೋಕೆ ಸಾಧ್ಯ. ಅಲ್ಲದೆ ಸರ್ಕಾರ ಖರ್ಚು ಮಾಡುವ ಪ್ರತಿ ಪೈಸೆ ಬಗ್ಗೆ ಸಾಮಾನ್ಯ ಜನರು ಪ್ರಶ್ನಿಸಬಹುದಾಗಿದೆ. ಸಚಿವರ ನಡುವೆ ಹೊಂದಾಣಿಕೆ ಇಲ್ಲದ ಪರಿಣಾಮ ಇಷ್ಟೆಲ್ಲಾ ಅವಾಂತರವಾಗಿದೆ ಎಂದರು.