ಬೆಂಗಳೂರು: ಹಲವು ವರ್ಷಗಳಿಂದ ಬೆಂಗಳೂರು ಸುತ್ತಮುತ್ತ ಕಾರು, ಬೈಕ್ ಹಾಗೂ ಚಿನ್ನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳಿಯರು ಸೇರಿ ಒಟ್ಟು 7 ಖತರ್ನಾಕ್ ಕಳ್ಳರನ್ನು ಯಶವಂತಪುರ ಉಪ ವಿಭಾಗದ ಬಾಗಲಗುಂಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 21 ದ್ವಿಚಕ್ರ ವಾಹನ, 2 ಸ್ವಿಫ್ಟ್ ಕಾರು ಸೇರಿ 332 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಮಂಜುನಾಥ್ ಅಲಿಯಾಸ್ ಕೋಳಿ ಮಂಜ (31), ದೀಪಕ್ ಆಲಿಯಾಸ್ ದೀಪು (31), ಮನು ಅಲಿಯಾಸ್ ಮಹೇಂದ್ರ (25), ದಯಾನಂದ ಅಲಿಯಾಸ್ ದಯಾ (21), ಮುನಿಸ್ವಾಮಿ ಅಲಿಯಾಸ್ ಸ್ವಾಮಿ (34), ಪ್ರೇಮ (50) ಮತ್ತು ಅನ್ನಪೂರ್ಣ ಅಲಿಯಾಸ್ ಅನು (28) ಬಂಧಿತ ಆರೋಪಿಗಳು.
ಕಳ್ಳತನ ಪ್ರಕರಣ ಕುರಿತು ಡಿಸಿಪಿ ವಿನಾಯಕ್ ಪಾಟೀಲ್ ಮಾಹಿತಿ ನೀಡಿರುವುದು.. 2018ರಿಂದ ಬಾಗಲಗುಂಟೆ, ನೆಲಮಂಗಲ, ಪೀಣ್ಯ, ಮಾದನಾಯಕನಹಳ್ಳಿ, ಕಾಮಾಕ್ಷಿಪಾಳ್ಯ, ವರ್ತೂರು ಸೇರಿ ಒಟ್ಟು 30 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಕಳವು, ಸರಗಳ್ಳತನ, ಮನೆಗಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪ್ರಕರಣದ ಕುರಿತು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:'ನೂತನ ಪೀಠದ ಬಗ್ಗೆ ಮಾತನಾಡೋರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ'
ಬಂಧಿತರು ಬಾಗಲಗುಂಟೆಯಲ್ಲಿ-6, ಪೀಣ್ಯ-1, ಮಾದನಾಯಕನಹಳ್ಳಿ-5, ಕಾಮಾಕ್ಷಿಪಾಳ್ಯ-1, ಸೋಲದೇವನಹಳ್ಳಿ-1, ನಂದಿನಿಲೇಔಟ್-5, ರಾಜಗೋಪಾಲನಗರ-1, ಪುಟ್ಟೇನಹಳ್ಳಿಯಲ್ಲಿ 1 ದ್ವಿಚಕ್ರ ವಾಹನಗಳು ಸೇರಿದಂತೆ ಹಲವು ಕಡೆ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.