ಬೆಂಗಳೂರು:ಕನ್ನಡದ 'ರಾಜರತ್ನ', ಅಭಿಮಾನಿಗಳ ನಲ್ಮೆಯ 'ಅಪ್ಪು' ಇಂದು ಸೂರ್ಯೋದಯದ ಹೊತ್ತಲ್ಲಿ ಕಂಠೀರವ ಸ್ಟುಡಿಯೋದ ಆವರಣದಲ್ಲಿ ಭೂತಾಯಿಯ ಗರ್ಭ ಸೇರಿದರು. ಡಾ.ರಾಜ್ ಕುಮಾರ್ ಹಾಗು ಪಾರ್ವತಮ್ಮ ರಾಜ್‌ಕುಮಾರ್ ಅವರ ಸಮಾಧಿಯ ಸಮೀಪವೇ ಪುನೀತ್ ಮೃತದೇಹವನ್ನು ಮಣ್ಣು ಮಾಡಲಾಯಿತು.
ಭದ್ರತಾ ಕಾರಣಗಳ ಹಿನ್ನೆಲೆಯಲ್ಲಿ ಕುಟುಂಬಸ್ಥರ ಸಮ್ಮತಿ ಪಡೆದು ಪ್ರಕಟಿಸಿದ ಸಮಯಕ್ಕೂ ಮೊದಲೇ ಶುಕ್ರವಾರ ಹೃದಯಸ್ತಂಭನದಿಂದ ಹಠಾತ್ ನಿಧನರಾದ ಯುವನಟನ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ. ಮೊದಲು ಗಣ್ಯಾತಿಗಣ್ಯರು ಪಾರ್ಥಿವ ಶರೀರದ ಮೇಲೆ ಪುಷ್ಪಗುಚ್ಛ ಅರ್ಪಿಸಿದರು. ನಂತರ ಪೊಲೀಸ್ ವಾದ್ಯಗೋಷ್ಠಿಯಿಂದ ರಾಷ್ಟ್ರಗೀತೆ ಮೊಳಗಿತು. ಅದೇ ಸಂದರ್ಭದಲ್ಲಿ ಪೊಲೀಸರು ಮೂರು ಬಾರಿ ಕುಶಾಲತೋಪು ಸಿಡಿಸಿದರು. ತದನಂತರ, ಎರಡು ನಿಮಿಷಗಳ ಮೌನ ಆಚರಿಸಲಾಯಿತು. ಇದಾದ ಕೂಡಲೇ, ಮೃತದೇಹದ ಮೇಲೆ ಹೊದಿಸಿದ್ದ ರಾಷ್ಟ್ರ ಧ್ವಜವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅವರ ಇಬ್ಬರು ಹೆಣ್ಣುಮಕ್ಕಳು ಉಪಸ್ಥಿತರಿದ್ದರು.
ಪೊಲೀಸರು ಮೊಳಗಿಸಿದ ಶೋಕಗೀತೆ ಹಾಗೂ ರಾಷ್ಟ್ರಗೀತೆಯ ಬಳಿಕ ಅಗಲಿದ ನಟನಿಗೆ ಸರ್ಕಾರದ ಗೌರವ ಸಮರ್ಪಣಾ ಕಾರ್ಯಕ್ರಮ ಪೂರ್ಣಗೊಂಡಿತು. ನಂತರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಷ್ಪಾಲಂಕೃತ ಹಂಸತೋಲಿಕಾ ಪಲ್ಲಕ್ಕಿಯಲ್ಲಿ ಪುನೀತ್ ಪಾರ್ಥಿವ ಶರೀರವನ್ನಿರಿಸಿ ಮೂರು ಬಾರಿ ಪ್ರದಕ್ಷಿಣೆ ಮಾಡಿಸಿ, ಗುಂಡಿಯೊಳಗೆ ಶವ ಇಳಿಸಲಾಯಿತು.
ಪುನೀತ್ ಅವರಿಗೆ ಗಂಡುಮಕ್ಕಳಿಲ್ಲ. ಹೀಗಾಗಿ ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜಕುಮಾರ್ ಅಂತಿಮ ವಿಧಿವಿಧಾನವನ್ನು ನೆರವೇರಿಸಿದರು. ಪತಿಯ ನೆನೆದು ಪತ್ನಿ, ಮಕ್ಕಳು, ಸೋದರನ ನೆನೆದು ಶಿವರಾಜಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಬಂಧುವರ್ಗ ಬಿಕ್ಕಿ ಬಿಕ್ಕಿ ಕಣ್ಣೀರು ಸುರಿಸಿದರು. ಸ್ಟುಡಿಯೋದ ಆವರಣದಲ್ಲೆಡೆ 'ಮತ್ತೆ ಹುಟ್ಟಿಬಾ ಅಪ್ಪು' ಎಂಬ ಘೋಷಣೆಗಳು ಅನುರಣಿಸುತ್ತಿದ್ದವು.