ಬೆಂಗಳೂರು :ಸಾರ್ವಜನಿಕರನ್ನು ತಡೆದು ಸುಲಿಗೆ ಮಾಡುತ್ತಿದ್ದ ದರೊಡೆಕೋರರನ್ನು ಕಾರ್ಯಾಚರಣೆ ನೆಡಸಿ ಪಶ್ಚಿಮ ವಿಭಾಗ ಜೆ ಜೆ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ನಾನಾ ಭಾಗಗಳಲ್ಲಿ ದ್ವಿಚಕ್ರ ವಾಹನ ಕಳವು ಮಾಡಿದ್ದ ಆರೋಪಿಗಳು, ಜನರಿಗೆ ಜೀವ ಬೆದರಿಕೆ ಹಾಕಿ ಮೊಬೈಲ್ ಹಣ ವಸೂಲಿ ಮಾಡುತ್ತಿದ್ದರು. ಸದ್ಯ ಜೆಜೆ ನಗರದ ಬಳಿ ವಸೂಲಿ ಮಾಡುವಾಗ ರೆಡ್ ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ನಾನಾ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಚಾರ ಬೆಳಕಿಗೆ ಬಂದಿದೆ. ವಿಜಯನಗರ, ಮಲ್ಲೇಶ್ವರಂ, ಹಲಸೂರು ಗೇಟ್, ಡಿಜೆಹಳ್ಳಿ ಸರಹದ್ದಿನಲ್ಲಿ ಅತಿಹೆಚ್ಚು ಕಳ್ಳತನ ಮಾಡಿದ್ದಾರೆ. ಅಲ್ಲದೆ ಕದ್ದ ಮಾಲನ್ನು ಶಾಹಿದ್ ಆಫ್ರಿದಿ ಎಂಬುವನಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಇದೀಗ ಕಬೀರ್, ಪರ್ವೇಜ್, ಶಾಹಿದ್ ಆಫ್ರಿದಿ, ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತರಿಂದ 9.48ಲಕ್ಷ ಬೆಲೆ ಬಾಳುವ 7 ದ್ವಿಚಕ್ರ ವಾಹನ ಹಾಗೂ 30 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದ್ದು, ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.