ಬೆಂಗಳೂರು:ಬೀದಿ ನಾಯಿ ವಿಚಾರಕ್ಕಾಗಿ ನೆರೆಹೊರೆ ಮನೆಯವರ ನಡುವೆ ಗಲಾಟೆ ನಡೆದಿದ್ದು, ಎರಡು ಕುಟುಂಬದವರು ಆರೋಪ-ಪ್ರತ್ಯಾರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮಲ್ಲೇಶ್ವರಂನ 6ನೇ ಮುಖ್ಯರಸ್ತೆಯ 13ನೇ ಕ್ರಾಸ್ ನಲ್ಲಿರುವ ಆರ್.ವಿ. ಎನ್ ಕ್ಲೇವ್ ಅಪಾರ್ಟ್‌ಮೆಂಟ್‌ನಲ್ಲಿ ಅನುರಾಧ-ಶ್ರೀನಿವಾಸ ದಂಪತಿ ವಾಸಿಸುತ್ತಿದ್ದಾರೆ. ಶ್ವಾನ ಪ್ರಿಯೆಯಾಗಿರುವ ಅನುರಾಧ ಕಳೆದ ಒಂದು ವರ್ಷದ ಹಿಂದೆ ಅಪಾರ್ಟ್‌ಮೆಂಟ್‌ನ ಸುತ್ತಮುತ್ತ ಓಡಾಡುತ್ತಿದ್ದ ನಾಯಿಯನ್ನು ತಂದು ಪೋಷಣೆ ಮಾಡುತ್ತಿದ್ದಾರೆ.
ಮನೆಯಂಗಳದಲ್ಲಿ ನಾಯಿ ಓಡಾಡಿಕೊಂಡಿರುತ್ತಿತ್ತು. ಇದನ್ನು ಸಹಿಸದ ಅಪಾರ್ಟ್‌ಮೆಂಟ್ ನಿವಾಸಿಗಳಾದ ಮೃದಲಾ ಮತ್ತು ಪ್ರಭಾಕರ್ ಎಂಬುವರು ನಾಯಿಯನ್ನು ಕಲ್ಲಿನಿಂದ ಹೊಡೆದು ಸಾಯಿಸಲು ಪ್ರಯತ್ನಿಸಿದ್ದಾರೆ ಎಂದು ಅನುರಾಧ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅನುರಾಧ ನೀಡಿದ ದೂರಿಗೆ ಸರೋಜಾ ಎಂಬವರು ಪ್ರತಿ ದೂರು ನೀಡಿದ್ದಾರೆ. ಅನುರಾಧ ಮತ್ತು ಅವರ ಪತಿ ಶ್ರೀನಿವಾಸ್ ಬೀದಿ ನಾಯಿಯನ್ನು ಸಾಕಿಕೊಂಡಿದ್ದಾರೆ. ಆ ಬೀದಿ ನಾಯಿಗೆ ಊಟ ಹಾಕಿ ಸುತ್ತಮುತ್ತ ಇರುವ ಜನರಿಗೆ ತೊಂದರೆ ನೀಡುತ್ತಿದ್ದಾರೆ. ಅದೇ ನಾಯಿ ಹಲವರಿಗೆ ಕಚ್ಚಲು ಮುಂದಾಗಿದ್ದಾಗ ಅದನ್ನು ಓಡಿಸಿದ್ದೇವೆ. ಇದನ್ನು ಕೇಳಲು ಅನುರಾಧ ಮನೆಗೆ ಹೋಗಿದ್ದಾಗ ಈ ವೇಳೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂದು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ಸಂಬಂಧ ದೂರು-ಪ್ರತಿ ದೂರು ಸ್ವೀಕರಿಸಿದ ಪೊಲೀಸರು ಪ್ರತ್ಯೇಕ ಎರಡು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.