ಬೆಂಗಳೂರು: ರಾಜ್ಯ ತಲುಪಿದ ನಂತರ ಕೆಲ ಪ್ರಯಾಣಿಕರು ಕ್ವಾರಂಟೈನ್ಗೆ ನಿರಾಕರಿಸಿ ರಂಪಾಟ ಮಾಡಿದ್ದರಿಂದ ಎಚ್ಚೆತ್ತುಕೊಂಡಿರುವ ರೈಲ್ವೆ ಇಲಾಖೆ, ಇದೀಗ ರೈಲು ಹೊರಡುವ ಮೊದಲೇ ಪ್ರಯಾಣಿಕರಿಗೆ ಕ್ವಾರಂಟೈನ್ ವಿಷಯ ಖಚಿತಪಡಿಸುತ್ತಿದೆ.
ಕ್ವಾರಂಟೈನ್ ಕಡ್ಡಾಯವೆಂದು ರೈಲು ಹೊರಡುವ ಮೊದಲೇ ಪ್ರಯಾಣಿಕರಿಗೆ ಖಚಿತಪಡಿಸುತ್ತಿದೆ ರೈಲ್ವೆ ಇಲಾಖೆ! - ಕ್ವಾರಂಟೈನ್ ಕಡ್ಡಾಯಗೊಳಿಸಿದ ರೈಲ್ವೆ ಇಲಾಖೆ
ಮೊದಲ ರೈಲಿನಲ್ಲಿ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕರು ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ಗೆ ನಿರಾಕರಿಸಿ ಗದ್ದಲ ನಡೆಸಿದ್ದರಿಂದ ಎಚ್ಚೆತ್ತ ರೈಲ್ವೆ ಇಲಾಖೆ, ಇದೀಗ ರೈಲು ಹೊರಡುವ ಮೊದಲೇ 3 ಬಾರಿ ಪ್ರಯಾಣಿಕರಿಗೆ ಕ್ವಾರಂಟೈನ್ ವಿಷಯ ಖಚಿತಪಡಿಸುತ್ತಿದೆ.
ಕಳೆದ ರಾತ್ರಿ ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣ ಆರಂಭಿಸಿದವರಿಗೆ, ರೈಲು ಹೊರಡುವ ಮೊದಲು ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ಈ ವೇಳೆ ಬಹಿರಂಗ ಪ್ರಕಟಣೆ ಮೂಲಕ ಬೆಂಗಳೂರು ತಲುಪಿದ ಕೂಡಲೇ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ಗೆ ಒಳಗಾಗುವುದು ಕಡ್ಡಾಯ ಎಂದು ತಿಳಿಸಲಾಯಿತು. ನಂತರ ಕರ್ನಾಟಕ ಭವನದ ಸಿಬ್ಬಂದಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿದ್ದ ಕರಪತ್ರಗಳನ್ನ ಪ್ರಯಾಣಿಕರಿಗೆ ನೀಡಿ, ಮತ್ತೊಮ್ಮೆ ಕ್ವಾರಂಟೈನ್ ವಿಷಯದ ಬಗ್ಗೆ ತಿಳುವಳಿಕೆ ನೀಡಿದರು.
ಅಂತಿಮವಾಗಿ ರೈಲು ಹೊರಡುವ ಮುನ್ನ ಮತ್ತೊಮ್ಮೆ ಎಸ್ಎಂಎಸ್ ಮೂಲಕವೂ ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರಿಗೆ ಮಾಹಿತಿ ನೀಡಲಾಯಿತು. ಮೊದಲ ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕರು ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ಗೆ ನಿರಾಕರಿಸಿ ಗದ್ದಲ ನಡೆಸಿದ್ದರು. ಕ್ವಾರಂಟೈನ್ ಮಾಡುವ ವಿಷಯ ಗೊತ್ತಿದ್ದರೆ ನಾವು ಬರುತ್ತಲೇ ಇರಲಿಲ್ಲ ಎಂದಿದ್ದರು. ಈ ಘಟನೆ ನಂತರ ರೈಲ್ವೆ ಇಲಾಖೆ ಎಚ್ಚೆತ್ತುಕೊಂಡಿದ್ದು, ದೆಹಲಿಯಲ್ಲಿರುವ ಕರ್ನಾಟಕ ಭವನ ಸಿಬ್ಬಂದಿ ಸಹಕಾರ ಪಡೆದು ಮೂರು ಹಂತದಲ್ಲಿ ಕ್ವಾರಂಟೈನ್ ಬಗ್ಗೆ ಮಾಹಿತಿ ನೀಡಿಯೇ ಪ್ರಯಾಣಿಕರನ್ನ ಕರೆ ತರುವ ಕಾರ್ಯ ಆರಂಭಿಸಿದೆ.