ಬೆಂಗಳೂರು: ಆಂಬ್ಯುಲೆನ್ಸ್ ಕರೆಸಿ ಅದರಲ್ಲಿ ಆಸ್ಪತ್ರೆಗೆ ಕರೆದೊಯ್ಯುವುದು ಟ್ರಾಫಿಕ್ನಿಂದಾಗಿ ತಡವಾಗುತ್ತೆ ಎಂದು ಕಾರಲ್ಲೇ ಕರೆದೊಯ್ಯಬೇಕಾಯಿತು. ಅಪ್ಪು ಒಂದು ಕಾರಣದಿಂದ ನಮ್ಮನ್ನು ಬಿಟ್ಟು ಹೋಗಿದ್ದಾನೆ. ಈಗ ನಾವು ಸರಿಹೋಗಬೇಕು. ಆಗ ನೂರಾರು ಅಪ್ಪುಗಳನ್ನು ಪಡೆಯಬಹುದು ಎಂದು ಬೆಂಗಳೂರು ಟ್ರಾಫಿಕ್ ಸಮಸ್ಯೆ ಬಗ್ಗೆ ರಾಘವೇಂದ್ರ ರಾಜಕುಮಾರ್ ಮಾರ್ಮಿಕವಾಗಿ ಮಾತನಾಡಿದರು.
ಕರ್ನಾಟಕ ಟಿವಿ ಅಸೋಸಿಯೇಷನ್ ವತಿಯಿಂದ ಜಯನಗರದ ಹೆಚ್. ಎನ್. ಕಲಾಕ್ಷೇತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಸ್ಮರಣಾರ್ಥ ಆಯೋಜಿಸಿರುವ 'ಅಪ್ಪು ಅಮರ' ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜಕುಮಾರ್ ಮಾತನಾಡಿದರು.
ಸಮಸ್ಯೆಯ ಬಗ್ಗೆ ನಾನು ಯಾರನ್ನೂ ದೂರುತ್ತಿಲ್ಲ. ನಾವೆಲ್ಲರೂ ಸರಿಯಾಗಬೇಕಿದೆ. ಆಂಬ್ಯುಲೆನ್ಸ್ಗಳಿಗೆ ಡಿಜಿಟಲ್ ಬೋರ್ಡ್ ಬರಬೇಕಿದೆ. ಇದನ್ನು ಟ್ರಾಫಿಕ್ ಪೊಲೀಸನವರು ನೋಡಿ ಆಂಬ್ಯುಲೆನ್ಸ್ ಸಂಚಾರಕ್ಕೆ ರೋಡ್ ಕ್ಲಿಯರ್ ಮಾಡಿಸಬಹುದು. ಇನ್ನೊಂದು 4 ನಿಮಿಷದಲ್ಲಿ ಅಪ್ಪು ಆಸ್ಪತ್ರೆಗೆ ಹೋಗ್ತಿದ್ದ. ಆದ್ರೆ ಹೋಗುವಷ್ಟರಲ್ಲಿ ಆಗಿದ್ದನ್ನು ನಾವು ಹೇಗೆ ಮರೆಯುವುದು. ಆದ್ದರಿಂದ ಆಸ್ಪತ್ರೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ವಿಸ್ತರಿಸಬೇಕಾಗಿದೆ. ಇದನ್ನು ಬದಲಾಯಿಸುವಂತೆ ನಾನು ಸರ್ಕಾರಕ್ಕೆ ಕೇಳುತ್ತಿಲ್ಲ. ನಾವೆಲ್ಲರೂ ಬದಲಾದಾಗ ಮಾತ್ರ ಸಮಸ್ಯೆ ಪರಿಹಾರವಾಗುತ್ತದೆ ಎಂದು ತಿಳಿಸಿದರು.
ನೂರಾರು ವರ್ಷ ಹಂದಿಯಾಗಿ ಬಾಳುವುದಕ್ಕಿಂತ ಕೆಲ ವರ್ಷ ನಂದಿಯಾಗಿ ಬಾಳಬೇಕು ಅನ್ನೋದನ್ನು ಅಪ್ಪು ತೋರಿಸಿ ಕೊಟ್ಟಿದ್ದಾನೆ. ಚಿಕ್ಕ ವಯಸ್ಸಿನಿಂದಲೇ ಅಪ್ಪುಗೆ ಎಲ್ಲವೂ ಅರ್ಜೆಂಟಾಗಿ ಬಂತು. ಚಿಕ್ಕವಯಸ್ಸಿನಲ್ಲೇ ಎಲ್ಲವನ್ನೂ ಮಾಡಿದ. 50 ವರ್ಷದಲ್ಲಿ ಮಾಡಬೇಕಾದ್ದನ್ನು 25 ವರ್ಷದಲ್ಲೇ ಮಾಡಿದ್ದಾನೆ. ಮ್ಯಾರಥಾನ್ ಓಡುವ ಬದಲು 100 ಮೀಟರ್ ರೇಸ್ ಓಡಿದ್ದಾನೆ ಎಂದು ರಾಘಣ್ಣ ಭಾವುಕರಾದರು.