ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಅನಿವಾರ್ಯವಾಗಿ ಲಾಕ್‌ಡೌನ್ ಹೇರಿದೆ. ಆರ್ಥಿಕವಾಗಿ ದೊಡ್ಡ ವಿಪತ್ತು ಸೃಷ್ಟಿಸುವ ಈ ಲಾಕ್‌ಡೌನ್ ರಾಜ್ಯದ ಬೊಕ್ಕಸವನ್ನು ಹೀರಿ ಬಿಟ್ಟಿದೆ. ಈವರೆಗೆ ರಾಜ್ಯದ ಬೊಕ್ಕಸಕ್ಕಾಗಿರುವ ನಷ್ಟದ ವಿವರ ಇಲ್ಲಿದೆ ನೋಡಿ.
ಕೋವಿಡ್ ಎರಡನೇ ಅಲೆ ರಾಜ್ಯವ್ಯಾಪಿ ವೇಗವಾಗಿ ಹರಡುತ್ತಿದೆ. ಕೊರೊನಾ ಅಟ್ಟಹಾಸಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ಲಾಕ್‌ಡೌನ್ ಹೇರಿದೆ. ಅಗತ್ಯ ಸೇವೆಗಳಿಗೆ ನಿರ್ಬಂಧಿತ ಹಾಗೂ ನಿಯಮಿತ ಅನುಮತಿ ನೀಡುವ ಮೂಲಕ ಏಪ್ರಿಲ್ 27ರಿಂದ ಮೇ 24ರ ವರೆಗೆ ಲಾಕ್‌ಡೌನ್ ಹೇರಿದೆ. ಮೇ ತಿಂಗಳಾಂತ್ಯದ ವರೆಗೆ ಲಾಕ್‌ಡೌನ್ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ.
ಲಾಕ್‌ಡೌನ್ ರಾಜ್ಯದಲ್ಲಿ ಕೊರೊನಾ ಮಟ್ಟ ಹಾಕುವಲ್ಲಿ ನಿರೀಕ್ಷಿಸಿದಷ್ಟರ ಮಟ್ಟಿಗೆ ಅಲ್ಲವಾದರೂ ಸ್ವಲ್ಪ ಮಟ್ಟಿಗೆ ಅಲ್ಪವಿರಾಮ ಹಾಕಿದೆ. ಆದರೆ, ಲಾಕ್‌ಡೌನ್ ಆರ್ಥಿಕತೆಯನ್ನು ಮಾತ್ರ ಸರ್ವನಾಶಕ್ಕೆ ಕೊಂಡೊಯ್ದಿದೆ. ಲಾಕ್ಡೌನ್ನಿಂದ ಬಹುತೇಕ ಆರ್ಥಿಕ ಚಟುವಟಿಕೆ ಸ್ಥಗಿತವಾಗಿರುವುದರಿಂದ ರಾಜ್ಯದ ಬೊಕ್ಕಸ ಸೇರುವ ಹಣದಲ್ಲಿ ಭಾರಿ ನಷ್ಟ ಉಂಟಾಗುತ್ತಿದೆ. ರಾಜ್ಯದ ಬೊಕ್ಕಸ ಸೇರಬೇಕಾದ ತೆರಿಗೆ ಹಣ ಕಳೆದ ಒಂದು ತಿಂಗಳಿಂದ ಬರಿದಾಗುತ್ತಿದೆ.
ರಾಜ್ಯದ ತೆರಿಗೆ ಸಂಗ್ರಹದಲ್ಲಾಗಿರುವ ನಷ್ಟ ಏನು ?:ರಾಜ್ಯ ಸರ್ಕಾರ ಈ ಬಾರಿ ಸ್ವಂತ ತೆರಿಗೆ ಮೂಗಳಿಂದ ಸುಮಾರು 1,24,201.98 ಕೋಟಿ ರೂ. ಸಂಗ್ರಹಿಸುವ ಅಂದಾಜು ಮಾಡಿದೆ. ಆದರೆ, ಆರ್ಥಿಕ ವರ್ಷದ ಆರಂಭದಲ್ಲೇ ಈ ಲೆಕ್ಕಾಚಾರವನ್ನು ಕೊರೊನಾ ಎರಡನೇ ಅಲೆ ಬುಡಮೇಲಾಗಿಸಿದೆ. ಏಪ್ರಿಲ್ ತಿಂಗಳಲ್ಲಿ ನಿರ್ಬಂಧ ಇದ್ದರೆ, ಏಪ್ರಿಲ್ 27ರ ಬಳಿಕ ರಾಜ್ಯಾದ್ಯಂತ ಲಾಕ್‌ಡೌನ್ ಹೇರಿಕೆಯಾಗಿದೆ. ಹೀಗಾಗಿ ರಾಜ್ಯದ ಸ್ವಂತ ತೆರಿಗೆ ಮೂಲಗಳು ಭಾಗಶಃ ಬರಿದಾಗಿವೆ.
ಪ್ರಮುಖ ಆದಾಯ ತರುವ ತೆರಿಗೆಗಳಾದ ವಾಣಿಜ್ಯ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಅಬಕಾರಿ, ಮೋಟಾರು ವಾಹನ ತೆರಿಗೆ ಲಾಕ್‌ಡೌನ್ ನಿಂದ ಬತ್ತಿ ಹೋಗಿವೆ. ಲಾಕ್‌ಡೌನ್ ಹಿನ್ನೆಲೆ ರಾಜ್ಯದ ಸ್ವಂತ ತೆರಿಗೆಗಳಿಂದ ಬರಬೇಕಾದ ಆದಾಯದಲ್ಲಿ ಅಂದಾಜು 5,000 ಕೋಟಿ ರೂ.ಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಾಣಿಜ್ಯ ತೆರಿಗೆ ನಷ್ಟ:ರಾಜ್ಯದ ಬೊಕ್ಕಸ ತುಂಬಿಸುವಲ್ಲಿ ವಾಣಿಜ್ಯ ತೆರಿಗೆ ದೊಡ್ಡ ಪಾತ್ರ ವಹಿಸುತ್ತದೆ. ಸ್ವಂತ ತೆರಿಗೆ ಮೂಲದಲ್ಲಿ ಸುಮಾರು ಶೇ 62ರಷ್ಟು ಕೊಡುಗೆ ವಾಣಿಜ್ಯ ತೆರಿಗೆಯದ್ದೇ. 2021-22 ಸಾಲಿನಲ್ಲಿ ಅಂದಾಜು 76,473 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಅದರಂತೆ ತಿಂಗಳಿಗೆ ಸುಮಾರು 6,300 ಕೋಟಿ ರೂ. ಸಂಗ್ರಹವಾಗಬೇಕಿದೆ. ಆದರೆ, ಬಹುತೇಕ ವ್ಯಾಪಾರ ವಹಿವಾಟು ಸ್ಥಗಿತವಾಗಿರುವುದರಿಂದ ಕಳೆದ ಏಪ್ರಿಲ್ 27ರಿಂದ ಇಲ್ಲಿವರೆಗೆ ಸುಮಾರು 3,500 ಕೋಟಿ ರೂ.ವಾಣಿಜ್ಯ ತೆರಿಗೆ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರದ ಜಿಎಸ್ ಟಿ ಸಲಹಾ ಸಮಿತಿ ಸದಸ್ಯ ಬಿ.ಟಿ.ಮನೋಹರ್ ತಿಳಿಸಿದ್ದಾರೆ.
ಇತ್ತ ವಾಣಿಜ್ಯ ತೆರಿಗೆ ವ್ಯಾಪ್ತಿಗೆ ಬರುವ ತೈಲ ಮಾರಾಟ ತೆರಿಗೆ ಮೂಲಕ ರಾಜ್ಯದ ಬೊಕ್ಕಸಕ್ಕೆ ಮಾಸಿಕ 1,250 ಕೋಟಿ ರೂ. ಸಂಗ್ರಹವಾಗುತ್ತದೆ. ಆದರೆ ಈ ಲಾಕ್‌ಡೌನ್ ನಿಂದ ಸುಮಾರು 200-300 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿಸಿದ್ದಾರೆ.