ಕರ್ನಾಟಕ

karnataka

By

Published : Dec 31, 2021, 7:14 AM IST

ETV Bharat / city

ಒಕ್ಕಲಿಗರ ಸಂಘದ ಚುನಾವಣೆಯ ಮತಗಳ ಮರು ಎಣಿಕೆಗೆ ಅರ್ಜಿ: ಹೈಕೋರ್ಟ್‌ ನೋಟಿಸ್

ರಾಜ್ಯ ಒಕ್ಕಲಿಗರ ಸಂಘಕ್ಕೆ ಡಿ.12ರಂದು ನಡೆದಿದ್ದ ಚುನಾವಣೆಯಲ್ಲಿ ಚಲಾವಣೆಗೊಂಡಿರುವ ಎಲ್ಲ ಮತಗಳ ಮರುಎಣಿಕೆ ನಡೆಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಸಂಘದ ಆಡಳಿತಾಧಿಕಾರಿ ಹಾಗೂ ಚುನಾವಣಾಧಿಕಾರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಹೈಕೋರ್ಟ್‌
ಹೈಕೋರ್ಟ್‌

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘಕ್ಕೆ ಕಳೆದ ಡಿಸೆಂಬರ್ 12 ರಂದು ನಡೆದಿದ್ದ ಚುನಾವಣೆ ವೇಳೆ ಮತ ಎಣಿಕೆಯಲ್ಲಿ ಅಕ್ರಮ ನಡೆದಿದ್ದು, ಮತಗಳ ಮರು ಎಣಿಕೆ ನಡೆಸಲು ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ಚುನಾವಣಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ.

ಬೆಂಗಳೂರು ಉತ್ತರ ತಾಲೂಕಿನ ಕಡತನಮಲೆ ಗ್ರಾಮದ ನಿವಾಸಿ ಕೆ.ಆರ್.ಸತೀಶ್ ಹಾಗೂ ಇತರೆ ಇಬ್ಬರು ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಪೀಠ, ಚುನಾವಣಾಧಿಕಾರಿ ಹಾಗೂ ಸಂಘದ ಆಡಳಿತಾಧಿಕಾರಿಗೆ ತುರ್ತು ನೋಟಿಸ್ ನೀಡಿದೆ.

ಅರ್ಜಿದಾರರ ಕೋರಿಕೆ:

ರಾಜ್ಯ ಒಕ್ಕಲಿಗರ ಸಂಘಕ್ಕೆ ಇದೇ 2021ರ ಡಿಸೆಂಬರ್ 12 ರಂದು ಚುನಾವಣೆ ನಡೆದಿತ್ತು. ಬೆಂಗಳೂರು ನಗರ ಜಿಲ್ಲೆಯ 15 ಆಡಳಿತ ಮಂಡಳಿ ನಿರ್ದೇಶಕರ ಹುದ್ದೆಗಳ ಆಯ್ಕೆಗೆ ಚಲಾವಣೆಯಾಗಿದ್ದ ಮತಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ. ಮತ ಎಣಿಕೆ ಮಾಡುತ್ತಿದ್ದ ಸಿಬ್ಬಂದಿಯಿಂದ ಪಡೆದುಕೊಂಡ ದಾಖಲೆಗಳಿಂದ ಅಕ್ರಮ ಬೆಳಕಿಗೆ ಬಂದಿದೆ. ಚಲಾವಣೆಯಾದ ಮತಗಳ ವಿವರ ದಾಖಲಿಸಿದ್ದ ಮಾರ್ಕ್ಸ್ ಶೀಟ್​ಗಳಲ್ಲಿರುವ ಸಂಖ್ಯೆಗಳಿಗೂ, ನಂತರ ಕಂಪ್ಯೂಟರ್​ನಲ್ಲಿ ದಾಖಲಿಸಿರುವ ಸಂಖ್ಯೆಗಳಿಗೂ ಹೊಂದಾಣಿಕೆ ಇಲ್ಲ. ಮತ ಎಣಿಕೆ ವೇಳೆ ಚುನಾವಣೆಯಲ್ಲಿ ಹಿತಾಸಕ್ತಿ ಹೊಂದಿರುವ ವ್ಯಕ್ತಿಗಳು ಕೂಡ ಭಾಗಿಯಾಗಿದ್ದರು. ಮತ ಎಣಿಕೆಗೆ ನಿಯೋಜಿಸಿದ್ದ ಸಿಬ್ಬಂದಿಯ ಮಾಹಿತಿ ಕೇಳಿದರೆ ಚುನಾವಣಾಧಿಕಾರಿ ಈವರೆಗೆ ವಿವರ ನೀಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಅಲ್ಲದೇ, ಮತಗಳ ಮರು ಎಣಿಕೆ ಮಾಡುವಂತೆ ಡಿಸೆಂಬರ್ 23ರಂದು ಸಲ್ಲಿಸಿರುವ ಮನವಿಯನ್ನು ಕೂಡ ಚುನಾವಣಾಧಿಕಾರಿ ಪರಿಗಣಿಸಿಲ್ಲ. ಆದ್ದರಿಂದ ಚುನಾವಣಾಧಿಕಾರಿಗೆ ಮತಗಳನ್ನು ಮರು ಎಣಿಕೆ ಮಾಡುವಂತೆ ನಿರ್ದೇಶಿಸಬೇಕು. ಮತದಾರರಲ್ಲದ ಹಾಗೂ ಚುನಾವಣೆಯಲ್ಲಿ ಹಿತಾಸಕ್ತಿ ಹೊಂದಿಲ್ಲದ ಸ್ವತಂತ್ರ ವ್ಯಕ್ತಿಗಳನ್ನು ಮತ ಎಣಿಕೆಗೆ ನಿಯೋಜಿಸಲು ಹಾಗೂ ಮರು ಎಣಿಕೆ ಮಾಡಿ ಚುನಾಯಿತ ಅಭ್ಯರ್ಥಿಗಳನ್ನು ಘೋಷಿಸಲು ಚುನಾವಣಾಧಿಕಾರಿಗೆ ನಿರ್ದೇಶಿಸಬೇಕು. ಈ ಕುರಿತು ಡಿಸೆಂಬರ್ 23 ರಂದು ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ಮತ್ತು ಅರ್ಜಿ ಇತ್ಯರ್ಥವಾಗುವವರೆಗೆ ಬೆಂಗಳೂರಿನ 15 ಸ್ಥಾನಗಳಿಗೆ ಸಂಬಂಧಿಸಿದ 389 ಮತ ಪೆಟ್ಟಿಗೆಗಳನ್ನು ಪೊಲೀಸ್ ಭದ್ರತೆಯಲ್ಲಿ ಇರಿಸಿಕೊಳ್ಳುವಂತೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ABOUT THE AUTHOR

...view details