ಕರ್ನಾಟಕ

karnataka

ETV Bharat / city

ಹೆಚ್ಚಾದ ಪ್ರತ್ಯೇಕ ಜಿಲ್ಲೆಯ ಕಾವು... ತುಮಕೂರು ವಿಭಜಿಲು ಸಿಎಂಗೆ ಪರಮೇಶ್ವರ್​​ ಪತ್ರ

ಬಳ್ಳಾರಿ, ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ದೊಡ್ಡಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಹೀಗಾಗಿ ಆಡಳಿತಾತ್ಮಕ ದೃಷ್ಟಿಯಿಂದ ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆ ಮಾಡುವಂತೆ ಸಿಎಂಗೆ ಪತ್ರ ಬರೆದಿದ್ದೇನೆ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್​​ ತಿಳಿಸಿದ್ದಾರೆ.

parameshwar-ahead-of-the-tumkur-division

By

Published : Oct 1, 2019, 6:10 PM IST

ಬೆಂಗಳೂರು:ವಿಜಯನಗರವನ್ನು ಬಳ್ಳಾರಿಯಿಂದ ವಿಭಜಿಸಿ ಹೊಸ ಜಿಲ್ಲೆ ರಚಿಸಲು ಚರ್ಚೆ ನಡೆಯುತ್ತಿರುವ ಬೆನ್ನಲ್ಲೆ ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್​ ತುಮಕೂರಿನ ಮಧುಗಿರಿ ತಾಲೂಕನ್ನು ಜಿಲ್ಲೆಯನ್ನಾಗಿ ವಿಭಜಿಸುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಬಳ್ಳಾರಿ, ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ದೊಡ್ಡಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಹೀಗಾಗಿ ಆಡಳಿತಾತ್ಮಕ ದೃಷ್ಟಿಯಿಂದ ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆ ಮಾಡುವಂತೆ ಸಿಎಂಗೆ ಪತ್ರ ಬರೆದಿದ್ದೇನೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರನ್ನು ಈಗಾಗಲೇ ಶೈಕ್ಷಣಿಕ ಜಿಲ್ಲೆಯನ್ನಾಗಿ ಮಾಡಿದ್ದೇವೆ. ನಾನು ಮಧುಗಿರಿ ಶಾಸಕನಾಗಿದ್ದಾಗಿನಿಂದಲೂ ಸ್ಥಳೀಯರ ಅಭಿಪ್ರಾಯವೂ ಇದೇ ಆಗಿದೆ. ಹಾಗಾಗಿ ಬಳ್ಳಾರಿ, ಬೆಳಗಾವಿ ವಿಭಜನೆಗೆ ಮುಂದಾದರೆ ತುಮಕೂರನ್ನೂ ಮಾಡಬೇಕು ಎಂದು ಒತ್ತಾಯಿಸಿದರು.

ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್

ಪ್ರಧಾನಿ ಟ್ವೀಟ್ ಪ್ರಸ್ತಾಪ:ಬಿಹಾರ ಸಿಎಂಗೆ ಪ್ರಧಾನಿ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಹಾರ ನೆರೆ ಸಂತ್ರಸ್ತರಿಗೆ ಸಹಾಯ ಮಾಡುವುದು ಅನಿವಾರ್ಯ. ಅದಕ್ಕೆ ನಮ್ಮ‌ ವಿರೋಧವಿಲ್ಲ. ಅದೇ ರೀತಿ ಕರ್ನಾಟಕದತ್ತಲೂ ಕಣ್ಣೆತ್ತಿ ನೋಡಿ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಎಲ್ಲರನ್ನು ಸಮನಾಗಿ ಕಾಣಬೇಕು. ಸಿಎಂ ಯಡಿಯೂರಪ್ಪ ಎಷ್ಟು ನೆರವು ಕೇಳಿದ್ದಾರೋ ಗೊತ್ತಿಲ್ಲ. ಅವರ ಮಾತಿಗೂ ಪ್ರಧಾನಿಯವರು ಮನ್ನಣೆ ಕೊಡುತ್ತಿಲ್ಲ. ಅದೇಕೆ ಅವರು ನಿರ್ಲಕ್ಷ್ಯ ಮಾಡ್ತಿದ್ದಾರೋ ಗೊತ್ತಿಲ್ಲ. ಕೂಡಲೇ ಕೇಂದ್ರ ಸರ್ಕಾರ ನೆರವು ಘೋಷಿಸಬೇಕು. ಸಿಎಂ ಸರ್ವಪಕ್ಷ ನಿಯೋಗವನ್ನ ಕೊಂಡೊಯ್ಯಬೇಕು ಎಂದು ಆಗ್ರಹಿಸಿದರು.

ಪ್ರತಿಪಕ್ಷ ನಾಯಕ ಸ್ಥಾನವನ್ನು ಶೀಘ್ರದಲ್ಲೇ ಹೈಕಮಾಂಡ್ ತುಂಬಲಿದೆ. ಪದಾಧಿಕಾರಿಗಳನ್ನೂ ನೇಮಿಸಲಿದೆ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಮೊದಲೇ ಹಲವು ಕಾರ್ಯಕ್ರಮ ಹಾಕಿಕೊಂಡಿದ್ದೆ. ಹೀಗಾಗಿ ಪಕ್ಷದ ಸಭೆಗೆ ಹಾಜರಾಗಲಿಲ್ಲ. ಆದರೆ, ದಿನೇಶ್ ಗುಂಡೂರಾವ್ ಅವರು ಕರೆ ಮಾಡಿ ಸಭೆಗೆ ಬರುವಂತೆ ಆಹ್ವಾನ ನೀಡಿದ್ದರು. ಆದರೆ ಮೊದಲೇ ನಿಯೋಜಿಸಿದ್ದ ಕಾರ್ಯಕ್ರಮ ಇದ್ದ ಕಾರಣ ಬರಲಾಗಲಿಲ್ಲ ಅಷ್ಟೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೆವು. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿಸಿದಷ್ಟು ಫಲಿತಾಂಶ ಬರಲಿಲ್ಲ. ಹೀಗಾಗಿ ಕೆಲವರಲ್ಲಿ ಅಸಮಾಧಾನ ಮೂಡಿರಬಹುದು. ಮತ್ತೆ ನಾನೇ ಅಧ್ಯಕ್ಷನಾದರೆ ಸರಿ ಹೋಗುತ್ತೆ ಅಂತಾ ಹೇಳಲು ಸಾಧ್ಯವಿಲ್ಲ. ದಿನೇಶ್ ಅಧ್ಯಕ್ಷ ಸ್ಥಾನಕ್ಕೆ ಸಮರ್ಥರಿದ್ದಾರೆ. ಸಾಮೂಹಿಕ ನಾಯಕತ್ವದಡಿ ಹೋದರೆ ಎಲ್ಲವೂ ಸುಲಭ. ಅದಕ್ಕೆ ಅಡ್ಡಿಯೂ ಇಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಹಿರಿಯರು. ಮಹಾರಾಷ್ಟ್ರ ಚುನಾವಣೆ ಜವಾಬ್ದಾರಿ ಹೊತ್ತಿದ್ದಾರೆ. ಹೀಗಾಗಿ ಅವರು ಅಲ್ಲಿ ನಿರತರಾಗಿದ್ದಾರೆ. ಅವರ ಸಲಹೆಯನ್ನೂ ಪಡೆಯಲಿದ್ದೇವೆ ಎಂದರು.

ಸಾಧಕ ಬಾಧಕ ಅರಿತು ಅಧ್ಯಕ್ಷ ಸ್ಥಾನ ನೀಡಿದ್ದರು. ಈಗ ಪ್ರತಿಪಕ್ಷ ಸ್ಥಾನ ನೀಡಿ ಎಂದೂ ಕೇಳುವುದಿಲ್ಲ. ಸೋನಿಯಾ ಗಾಂಧಿ ಅವರನ್ನು ಭೇಟಿಯಾದಾಗ ಏನೂ ಬೇಡಿಕೆಯಿಟ್ಟಿಲ್ಲ. ಹೈಕಮಾಂಡ್ ನಿರ್ಧಾರವೇ ಅಂತಿಮ. ಸಿಎಂ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಜೋರು ಧ್ವನಿಯಲ್ಲಿ ವೀರಾವೇಶದಿಂದ ಮಾತನಾಡಿದ್ದರು. ಎರಡು ತಿಂಗಳು ಮುಗಿದಿಲ್ಲ. ಆಗಲೇ ಅಸಹಾಯಕರಾಗಿದ್ದಾರಾ ಎಂದು ತಂತಿ ಮೇಲಿನ ನಡಿಗೆ ಹೇಳಿಕೆಗೆ ಪರಮೇಶ್ವರ್ ವ್ಯಂಗ್ಯವಾಡಿದರು. ನಮ್ಮ ನಾಯಕ ಸಿದ್ದರಾಮಯ್ಯ ಕೂಡ ಸರ್ಕಾರ ಹೆಚ್ಚು ದಿನ ಇರಲ್ಲ ಅಂದಿದ್ದಾರೆ ಎಂದರು.

ABOUT THE AUTHOR

...view details