ಬೆಂಗಳೂರು: ಅಂಬೇಡ್ಕರ್ ಪ್ರಶಸ್ತಿ ಸ್ವೀಕರಿಸಲು ಚೆನ್ನೈಗೆ ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಯಾಣ ಬೆಳೆಸಿದರು. ತಮಿಳುನಾಡಿನ ವಿಡುದಲೈ ಚಿರುದೈಗಳ್ (ವಿಸಿಕೆ) ಪಕ್ಷ ಕೊಡುವ ಅಂಬೇಡ್ಕರ್ ಪ್ರಶಸ್ತಿಯನ್ನು ಇಂದು ಚೆನ್ನೈನಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಸಿದ್ದರಾಮಯ್ಯ ಸ್ವೀಕರಿಸಲಿದ್ದಾರೆ.
ಸಂಜೆ 4 ಗಂಟೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಅಂಬೇಡ್ಕರ್ ಪ್ರಶಸ್ತಿ ಸ್ವೀಕರಿಸಿದ ಬಳಿಕ ಕನ್ನಡದಲ್ಲೇ ಸಿದ್ದರಾಮಯ್ಯ ಭಾಷಣ ಮಾಡಲಿದ್ದಾರೆ. ರಾತ್ರಿ ತಮಿಳುನಾಡಿನ ಚೆನ್ನೈನಲ್ಲಿಯೇ ಅವರು ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿದು ಬಂದಿದೆ.
ಸ್ಟಾಲಿನ್ ಭೇಟಿ?:ತಮಿಳುನಾಡಿಗೆ ಭೇಟಿ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ರಾತ್ರಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರನ್ನ ಭೇಟಿ ಮಾಡುವ ಸಾಧ್ಯತೆ ಇದೆ. ತಮಿಳುನಾಡು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಜತೆ ಸಿದ್ದರಾಮಯ್ಯ ತೆರಳುವ ಸಾಧ್ಯತೆ ಇದೆ.
ಡಿಎಂಕೆ ಪಕ್ಷದ ಜತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ಲೋಕಸಭೆಯಲ್ಲಿ ಸ್ಥಾನ ಹಂಚಿಕೆ ಮಾಡಿಕೊಂಡಿದೆ. 2023 ರಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಆ ಸಂದರ್ಭ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಲಿದ್ದಾರೆ. ತಮಿಳುನಾಡು ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಮೈತ್ರಿ ಮಾಡಿಕೊಳ್ಳುವ ಸಂಬಂಧ ಸಹ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಸರ್ಕಾರವೇ ಸತ್ತುಹೋಗಿದೆ: ಸಿದ್ದರಾಮಯ್ಯ ತೀವ್ರ ಆಕ್ರೋಶ