ಕರ್ನಾಟಕ

karnataka

ETV Bharat / city

ಕುರುಬ ಸಮುದಾಯ ಒಡೆಯಲು RSS ಹುನ್ನಾರ, ಅದಕ್ಕಾಗಿ ಎಸ್‌ಟಿ ಹೋರಾಟ - ಸಿದ್ದರಾಮಯ್ಯ

ಬಿಜೆಪಿ ಮತ್ತು ಆರ್​​‍ಎಸ್​ಎಸ್ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧ. ಹೆಗಡೇವಾರ್, ಗೋಲ್ವಾಲ್ಕರ್ ಅವರು ಆರ್​​ಎಸ್​​ಎಸ್ ಸ್ಥಾಪಕರು. ಅವರು ಎಂದಾದರೂ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಪರ ಹೋರಾಟ ಮಾಡಿದ್ದಾರೆಯೇ..?

opposition leader siddaramaiah
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

By

Published : Dec 1, 2020, 7:12 PM IST

ಬೆಂಗಳೂರು :ಕುರುಬರ ಎಸ್ಟಿ ಹೋರಾಟದ ಹಿಂದೆ ಆರ್​​ಎಸ್‍ಎಸ್‍ನ ಕೈವಾಡವಿದೆ. ಇದು ಕುರುಬ ಸಮುದಾಯವನ್ನು ಒಡೆಯುವ ಹುನ್ನಾರ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಸ್ಟಿ ಹೋರಾಟದ ಹೆಸರಲ್ಲಿ ಕುರುಬ ಸಮುದಾಯವನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಆರ್​​​ಎಸ್‍ಎಸ್​​ನ ದತ್ತಾತ್ರೇಯ ಹೊಸಬಾಳೆ ಹಾಗೂ ಸಂತೋಷ್ ಅವರು ಈಶ್ವರಪ್ಪ ಅವರನ್ನು ಬಳಸಿಕೊಂಡು ಕುರುಬ ಸಮಾಜ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಹೆಚ್‌ ಎಂ ರೇವಣ್ಣ ಸೇರಿ ಯಾರೇ ಆದ್ರೂ ಹೋರಾಟದಲ್ಲಿ ಭಾಗವಹಿಸಲು ನನ್ನ ತಕರಾರಿಲ್ಲ. ಆರಂಭದಲ್ಲಿ ಆರ್​​ಎಸ್‍ಎಸ್ ಕೈವಾಡದ ಬಗ್ಗೆ ನನಗೆ ಗೊತ್ತಿರಲಿಲ್ಲ. ಈಗ ಈಶ್ವರಪ್ಪ ಅವರೇ ಹೇಳುತ್ತಿದ್ದಾರೆ. ಈಶ್ವರಪ್ಪ ಅವರು ಸ್ವಂತ ಬುದ್ಧಿಯಿಂದ ಹೋರಾಟ ಶುರು ಮಾಡಿಲ್ಲ ಎಂದು ಕಿಡಿಕಾರಿದರು.

ಈಶ್ವರಪ್ಪ ಸುಳ್ಳು ಹೇಳುತ್ತಿದ್ದಾರೆ :ನಾವು ಕರೆದರೂ ಕುರುಬರ ಎಸ್ಟಿ ಮೀಸಲಾತಿ ಹೋರಾಟದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸುತ್ತಿಲ್ಲ ಎಂದು ಈಶ್ವರಪ್ಪ ಅವರು ಹೇಳಿದ್ದಾರೆ. ಅವರು ನನ್ನನ್ನು ಕರೆದಿಲ್ಲ. ಬರುತ್ತೇನೆ ಅಥವಾ ಬರುವುದಿಲ್ಲ ಎಂದು ನಾನೂ ಅವರಿಗೆ ಹೇಳಿಲ್ಲ. ಈಶ್ವರಪ್ಪ ಅವರು ಈ ವಿಚಾರದಲ್ಲಿ ಸುಳ್ಳು ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟ ತಪ್ಪು ಎಂದು ಹೇಳುವುದಿಲ್ಲ. ಆರು ವರ್ಷದಿಂದ ಸುಮ್ಮನಿದ್ದು, ಈಗ ಹೋರಾಟಕ್ಕೆ ಕೈ ಹಾಕಿರುವುದರ ಉದ್ದೇಶವೇನು. ಹೋರಾಟದ ಹಿಂದೆ ಆರ್​​ಎಸ್‍ಎಸ್ ಇರುವುದರ ಮರ್ಮವೇನು? ಆರ್​​ಎಸ್ಎಸ್ ಎಂದೂ ಮೀಸಲಾತಿ ಪರ ಇಲ್ಲ. ಹಾವನೂರು ಆಯೋಗ, ವೆಂಕಟಸ್ವಾಮಿ ಆಯೋಗ, ಚಿನ್ನಪ್ಪರೆಡ್ಡಿ ಆಯೋಗ ಮತ್ತು ಮಂಡಲ್ ವರದಿಯನ್ನು ಅವರು ಸ್ವಾಗತ ಮಾಡಿದರೇ? ಎಲ್ಲ ಸಂದರ್ಭದಲ್ಲಿಯೂ ವಿರೋಧ ಮಾಡಿದ್ದಾರೆ.

ಬಿಜೆಪಿ ಮತ್ತು ಆರ್​​‍ಎಸ್​ಎಸ್ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧ. ಹೆಗಡೇವಾರ್, ಗೋಲ್ವಾಲ್ಕರ್ ಅವರು ಆರ್​​ಎಸ್​​ಎಸ್ ಸ್ಥಾಪಕರು. ಅವರು ಎಂದಾದ್ರೂ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಪರ ಹೋರಾಟ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.

ಕುರುಬರ ನಾಯಕ ನಾನೇ ಎಂದು ಈಶ್ವರಪ್ಪ ಅವರು ಹೇಳಿಕೊಳ್ಳಲಿ. ಅದಕ್ಕೆ ನನ್ನ ತಕರಾರು ಇಲ್ಲ. ಆದರೆ, ನಾಯಕ ಎಂದು ನಾವೇ ಹೇಳಿಕೊಳ್ಳುವುದಲ್ಲ. ಜನ ತೀರ್ಮಾನ ಮಾಡಬೇಕು. ಕುರುಬರನ್ನು ಎಸ್ಟಿಗೆ ಸೇರಿಸುವ ಮೊದಲು ಸಮುದಾಯಕ್ಕೆ ನೀಡುತ್ತಿರುವ ಮೀಸಲು ಪ್ರಮಾಣವನ್ನು ಶೇ.3ರಿಂದ ಶೇ.20ಕ್ಕೆ ಹೆಚ್ಚಿಸಬೇಕು. ಅದಕ್ಕೂ ಹೋರಾಟ ಮಾಡಬೇಕಿದೆ ಎಂದರು.

ಕಾಗಿನೆಲೆ ಮಠ ಸ್ಥಾಪನೆ ಸಂದರ್ಭದಲ್ಲಿ ಈಶ್ವರಪ್ಪ ಅವರು ಎಲ್ಲಿದ್ದರು?. ಅಂದು ಪತ್ತೆಯೇ ಇರಲಿಲ್ಲ. ಈಗ ಸ್ವಾಮೀಜಿಗಳನ್ನು ಕರೆದುಕೊಂಡು ಹೋರಾಟ ನಡೆಸುತ್ತಿದ್ದಾರೆ. ಉಡುಪಿಯ ಕನಕ ಗೋಪುರ ಕೆಡವಿದಾಗ ಎಲ್ಲಿ ಹೋಗಿದ್ದರು?. ಯಾವ ಮೀಸಲಾತಿ ಪರ ಅವರು ಹೋರಾಟ ಮಾಡಿದ್ದಾರೆ?. ರಾಜ್ಯಸಭಾ ಸದಸ್ಯರಾಗಿದ್ದ ರಾಮಾ ಜೋಯಿಸರು ಹಿಂದುಳಿದ ವರ್ಗದವರ ಮೀಸಲು ವಿರೋಧಿಸಿದಾಗ ಎಲ್ಲಿದ್ದರು?. ಬಿಜೆಪಿಯಲ್ಲಿ ಆಗ ಈಶ್ವರಪ್ಪ ಅವರು ಇದ್ದರಲ್ಲವೇ? ಏಕೆ ವಿರೋಧ ಮಾಡಲಿಲ್ಲ. ಈಗ ಇದ್ದಕ್ಕಿಂದ್ದರೆ ಪ್ರೀತಿ ಬಂದಿದೆ.

ಅವರು ಹೋರಾಟ ಮಾಡಲಿ. ಬೇಡ ಎನ್ನುವುದಿಲ್ಲ. ಮೊದಲು ಬೀದರ್, ಕಲಬುರಗಿ, ಯಾದಗಿರಿಯ ಗೊಂಡ, ರಾಜಗೊಂಡ ಸಮುದಾಯವನ್ನು ಎಸ್ಟಿಗೆ ಸೇರಿಸುವ ಕುರಿತು ಆದೇಶ ಜಾರಿ ಮಾಡಿಸಲಿ. ಎಸ್ಟಿ ಹೆಸರಲ್ಲಿ ಮುಗ್ಧ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಬೇಡ ಎಂಬುದು ನನ್ನ ಮನವಿ ಎಂದರು.

ABOUT THE AUTHOR

...view details