ಬೆಂಗಳೂರು: ಇಂದು ವಿಶ್ವ ತಂಬಾಕು ರಹಿತ ದಿನ. ಈ ವರ್ಷ ತಂಬಾಕಿನಿಂದ ಪರಿಸರ ಉಳಿಸಿ ಎಂಬ ಘೋಷಾ ವಾಕ್ಯದೊಂದಗೆ ವಿಶ್ವ ಆರೋಗ್ಯ ಸಂಸ್ಥೆ ತಂಬಾಕು ರಹಿತ ದಿನವನ್ನು ಆಚರಿಸುತ್ತಿದೆ. ಪ್ರತಿ ವರ್ಷ ತಂಬಾಕು ಸೇವನೆಗೆ ಯುವಕರಿಂದ ಹಿಡಿದು ಎಲ್ಲ ವಯಸ್ಸಿನವರು ಸಹ ಬಲಿಯಾಗುತ್ತಿದ್ದಾರೆ. ಅಷ್ಟೇ ಅಲ್ಲದೆ, ತಂಬಾಕು ಬೆಳೆಯಿಂದಲೂ ಪರಿಸರ ನಾಶವಾಗುತ್ತಿದೆ.
ಹೀಗಾಗಿ ತಂಬಾಕು ಸೇವನೆ ಹಾಗೂ ತಂಬಾಕು ಉತ್ಪಾದನೆ ಎರಡೂ ಅಪಾಯಕಾರಿ. ಇತರ ರಾಷ್ಟ್ರಗಳಲ್ಲಿ ವರ್ಷದಿಂದ ವರ್ಷಕ್ಕೆ ಧೂಮಪಾನ ಹಾಗೂ ಇತರ ತಂಬಾಕು ಸೇವಿಸುವವರ ಸಂಖ್ಯೆ ಕುಸಿತ ಕಾಣುತ್ತಿದ್ದರೆ, ಭಾರತದಲ್ಲಿ ಮಾತ್ರ ಏರಿಕೆ ಕಂಡು ಬರುತ್ತಿದೆ. ಅದರಲ್ಲೂ ಯುವಕರೇ ಈ ವ್ಯಸನಕ್ಕೆ ಬಲಿಯಾಗುತ್ತಿರುವುದು ದುರಾದೃಷ್ಟಕರ. ಧೂಮಪಾನ ಸೇವನೆಯಿಂದಾಗುವ ಆರೋಗ್ಯ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಫೋರ್ಟಿಸ್ ಆಸ್ಪತ್ರೆ ಶ್ವಾಸಕೋಶ ಸಲಹೆಗಾರ ಡಾ. ಮಜೀದ್ ಪಾಷಾ ವಿವರಿಸಿದ್ದಾರೆ.
ಸಾವಿನ ಸಂಖ್ಯೆ ಏರಿಕೆ:ಇತ್ತೀಚಿನ ಜಾಗತಿಕ ಯುವ ತಂಬಾಕು ಸಮೀಕ್ಷೆಯ ಪ್ರಕಾರ, 1/5 ಭಾರತೀಯ ಹದಿಹರೆಯದವರು (13 - 15 ವರ್ಷ ವಯಸ್ಸಿನವರು) ತಂಬಾಕು ಉತ್ಪನ್ನಗಳನ್ನು ಬಳಸುತ್ತಾರೆ. ಶೇ. 38ರಷ್ಟು ಯುವಜನತೆ ಧೂಮಪಾನಕ್ಕೆ ದಾಸರಾಗಿದ್ದಾರೆ. ಶೇ. 47ರಷ್ಟು ಮಂದಿ ಬೀಡಿ ಸೇವನೆ ಮಾಡುತ್ತಿದ್ದರೆ, ಶೇ. 52ರಷ್ಟು ಜನ ಹೊಗೆರಹಿತ ತಂಬಾಕು ಬಳಸುತ್ತಿದ್ದಾರೆ. ಅವರಲ್ಲಿ ಅನೇಕರು ತಂಬಾಕು ಸೇವನೆಯನ್ನು ಚಿಕ್ಕವಯಸ್ಸಿನಿಂದಲೇ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ತಂಬಾಕು ವ್ಯಸನದಿಂದ 6 ಸೆಕೆಂಡಿಗೆ ಒಬ್ಬರು ಮೃತಪಡುತ್ತಿದ್ದು, ವರ್ಷಕ್ಕೆ 10 ಲಕ್ಷ ಜನರು ತಂಬಾಕಿನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಮಹಿಳೆಯರದ್ದೇ ಮೇಲುಗೈ:ಪುರುಷರು ಮಾತ್ರ ತಂಬಾಕು ಸೇವನೆ ಮಾಡುತ್ತಾರೆ ಎಂಬ ತಪ್ಪು ಕಲ್ಪನೆ ಇದೆ. ಆದರೆ, ಇದು ಸುಳ್ಳು, ಪುರುಷರಷ್ಟೇ ಸಮಾನವಾಗಿ ಮಹಿಳೆಯರು ತಂಬಾಕು ಸೇವನೆ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ, ಮಹಿಳೆಯರು ಪಾನ್ ಮತ್ತು ಇತರ ಉತ್ಪನ್ನಗಳ ರೂಪದಲ್ಲಿ ಹೆಚ್ಚು ತಂಬಾಕನ್ನು ಸೇವಿಸುತ್ತಾರೆ.