ಬೆಂಗಳೂರು: ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಮಾರ್ಗ ಮಧ್ಯೆ ನಿದ್ದೆ ಬಂದಿದೆ ಎಂದು ನಡುರಸ್ತೆಯಲ್ಲಿ ಕ್ಯಾಬ್ನಲ್ಲೇ ಮಂಪರು ನಿದ್ದೆಗೆ ಜಾರಿದ ತಪ್ಪಿಗೆ ಚಾಲಕ ಕಾರನ್ನೇ ಕಳೆದುಕೊಂಡಿದ್ದಾನೆ.
ಕಾರಿನಲ್ಲಿ ನಿದ್ದೆ ಮಾಡುತ್ತಿದ್ದ ಚಾಲಕನಿಗೆ ಗೊತ್ತಿಲ್ಲದೇ ಖದೀಮರು ಕಾರ್ ಕೀ ಕಳ್ಳತನ ಮಾಡಿದ್ದಾರೆ. ಆ ಬಳಿಕ ಅಪರಿಚಿತನೊಬ್ಬ ಗಾಢ ನಿದ್ರೆಯಲ್ಲಿದ್ದ ಚಾಲಕನನ್ನು ಎಬ್ಬಿಸಿ ಕಾರ್ ಕೀ ಕದ್ದಿರುವುದಾಗಿ ಹೇಳಿ ಯಾಮಾರಿಸಿ ಕಾರನ್ನೇ ಕದ್ದಿರುವ ಘಟನೆ ಇಂದಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾವರೆಕೆರೆ ನಿವಾಸಿ ಲೋಕೇಶ್ ನೀಡಿದ ದೂರಿನ ಮೇರೆಗೆ ಇಂದಿರಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನಡೆದಿದ್ದಿಷ್ಟು...
ತಮ್ಮ ಎರ್ಟಿಗಾ ಕಾರನ್ನು ಕಳೆದ ಐದು ತಿಂಗಳಿನಿಂದ ಓಲಾ - ಉಬರ್ ಅಟ್ಯಾಚ್ ಮಾಡಿಕೊಂಡು ಬಾಡಿಗೆ ಓಡಿಸುತ್ತಿದ್ದರು. ಇದೇ ರೀತಿ ಕಳೆದ ಜ. 7 ರಂದು ಸಂಜೆ 5 ಗಂಟೆಗೆ ಡ್ಯೂಟಿ ಮಾಡಲು ಲಾಗಿನ್ ಆಗಿದ್ದರು. ಅದರಂತೆ ರಾತ್ರಿ ಹೆಚ್ಎಸ್ಆರ್ ಲೇಔಟ್ನಿಂದ ಕೆ.ಆರ್.ಪುರಂಗೆ ಬಾಡಿಗೆ ಬಂದಿತ್ತು. ಇದರಂತೆ ಬಾಡಿಗೆ ಮೇಲೆ ಗ್ರಾಹಕರನ್ನು ಪಿಕಪ್ ಮಾಡಿಕೊಂಡು ಕೆ.ಆರ್.ಪುರಂಗೆ ಬಂದಿದ್ದಾರೆ. ಬಳಿಕ ಮನೆಗೆ ಹೋಗಲು ಇಂದಿರಾ ನಗರದ ಬಳಿ ಬರುತ್ತಿದ್ದಂತೆ ಚಾಲಕನಿಗೆ ನಿದ್ದೆ ಬಂದಿದೆ. ಹೀಗಾಗಿ ಕರಾಚಿ ಬೇಕರಿ ಬಳಿ ಕಾರು ನಿಲ್ಲಿಸಿದ್ದಾನೆ.
ಗಾಳಿ ಬರಲು ಕಾರಿನ ಬಲಭಾಗದ ಗ್ಲಾಸ್ ಇಳಿಸಿ ನಿದ್ರೆಗೆ ಜಾರಿದ್ದಾನೆ. ಮಂಪರು ನಿದ್ದೆಯಲ್ಲಿರುವಾಗ ಅಪರಿಚಿತನೊಬ್ಬ ಲೋಕೇಶ್ನನ್ನು ಎಬ್ಬಿಸಿ ನಿಮ್ಮ ಕಾರು ಕೀ ಯಾರೋ ಕಳ್ಳತನ ಮಾಡಿ ಹೋಗಿದ್ದು ಬನ್ನಿ ಹುಡುಕೋಣ ಎಂದಿದ್ದಾನೆ. ಈತನ ಮಾತನ್ನ ನಂಬಿ ಕಾರಿನಿಂದ ಕೆಳಗಿಳಿದು ಕೀ ಕಳ್ಳತನ ಮಾಡಿದವನನ್ನು ಹುಡುಕಲು ಮುಂದಾಗಿದ್ದಾನೆ. ಚಾಲಕ ಇಳಿಯುತ್ತಿದ್ದಂತೆ ಪೂರ್ವ ಸಂಚಿನಂತೆ ಅಲ್ಲೇ ಇದ್ದ ಮೂವರು ಆರೋಪಿಗಳು ಕಾರು ಹತ್ತಿ ಸ್ಟಾರ್ಟ್ ಮಾಡಿದ್ದಾರೆ. ಚಾಲಕನ ಗಮನ ಬೇರೆಡೆ ಸೆಳೆದಿದ್ದ ಮತ್ತೋರ್ವ ಆರೋಪಿಯೂ ಅದೇ ಕಾರನ್ನು ಹತ್ತಿ ಕೋರಮಂಗಲ ಕಡೆ ಎಸ್ಕೇಪ್ ಆಗಿದ್ದಾನೆ ಎಂದು ಲೋಕೇಶ್ ದೂರಿನಲ್ಲಿ ವಿವರಿಸಿದ್ದಾನೆ.