ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ತೀವ್ರವಾಗಿ ಹೆಚ್ಚಾಗುತ್ತಿದೆ. ಈ ಮಧ್ಯೆ ಹೈ ರಿಸ್ಕ್ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಒಮಿಕ್ರಾನ್ ಸೋಂಕು ಕಾಣಿಸಿಕೊಳ್ಳುತ್ತಿದೆ.
ಹೀಗಾಗಿ, ಹೈ ರಿಸ್ಕ್ ದೇಶಗಳಿಂದ ಹಾಗೂ ಹೈ ರಿಸ್ಕ್ ಅಲ್ಲದ ದೇಶಗಳಿಂದ ಬರುವ ಎಲ್ಲ ಪ್ರಯಾಣಿಕರಿಗೂ ವಿಮಾನ ನಿಲ್ದಾಣದಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಪರೀಕ್ಷೆ ವೇಳೆ ಪಾಸಿಟಿವ್ ದೃಢಪಟ್ಟರೆ ಅಂತಹವರಿಗೆ ಹೋಂ ಐಸೋಲೇಷನ್ ನಿರ್ಬಂಧಿಸಿದ್ದು, ಚಿಕಿತ್ಸೆಗಾಗಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದೆ.
ಈ ಮಧ್ಯೆ ಪಾಸಿಟಿವ್ ಬಂದ ಶೇ.90 ಕ್ಕಿಂತ ಹೆಚ್ಚು ರೋಗಿಗಳು ಯಾವುದೇ ಸೋಂಕಿನ ಲಕ್ಷಣಗಳನ್ನು ಹೊಂದಿಲ್ಲ ಹಾಗೂ ಸೌಮ್ಯ ರೋಗಲಕ್ಷಣಗಳೊಂದಿಗೆ 1-3 ದಿನಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕೋವಿಡ್-19 ಪಾಸಿಟಿವ್‌ಗಳ ಸಂಖ್ಯೆ ಹೆಚ್ಚುತ್ತಿರುವ ಪ್ರಸ್ತುತ ಸನ್ನಿವೇಶವನ್ನು ಪರಿಗಣಿಸಿ, ಆಸ್ಪತ್ರೆಯ ಬೆಡ್‌ಗಳನ್ನು ಲಕ್ಷಣರಹಿತ ಮತ್ತು ಸೌಮ್ಯ ರೋಗಲಕ್ಷಣಗಳ ಬದಲಿಗೆ ಮಧ್ಯಮ ಮತ್ತು ತೀವ್ರತರವಾದ ಪ್ರಕರಣಗಳಿಗೆ ಬಳಸಬೇಕಾಗಿದೆ.
ಈ ನಿಟ್ಟಿನಲ್ಲಿ ಮೇಲಿನ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚು ಅಪಾಯದ ದೇಶಗಳಿಂದ ಬರುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಸರ್ಕಾರಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಉಚಿತವಾಗಿ ಇರಬಹುದಾಗಿದೆ. ಆದರೆ ಈಗಾಗಲೇ ಗೊತ್ತುಪಡಿಸಿದ ಕಟ್ಟಡಗಳಲ್ಲಿ ಲಕ್ಷಣರಹಿತ ಮತ್ತು ಸೌಮ್ಯ ರೋಗಲಕ್ಷಣದ ಸೋಂಕಿತರು ಇರಬಹುದು.