ಮೂರು ದಿನಗಳಲ್ಲಿ ಹೊಸ ವರ್ಷಾಚರಣೆಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟ
13:40 December 26
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ
ಬೆಂಗಳೂರು:ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುವ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮೂರು ದಿನಗಳಲ್ಲಿ ಗೈಡ್ಲೈನ್ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಕೋವಿಡ್ ನಿಯಮಾವಳಿಗಳಂತೆ ನೂತನ ವರ್ಷಕ್ಕೂ ಗೃಹ ಸಚಿವರು ಮಾರ್ಗಸೂಚಿ ಹೊರಡಿಸಲಿದ್ದಾರೆ. ಡಿ.30 ಮತ್ತು 31ರಂದು ಆಚರಣೆಗೆ ಅವಕಾಶ ಮಾಡಿಕೊಡದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ನಮ್ಮ ಅಧಿಕಾರಿಗಳ ಜೊತೆ ಸಭೆ ಮಾಡುತ್ತೇನೆ. ಅವರ ಜೊತೆ ಚರ್ಚೆ ನಡೆಸಿ ಏನೆಲ್ಲಾ ಕ್ರಮಗಳು ಜರುಗಿಸಬಹುದು. ವಿನಾಯಿತಿ ಏನು ನೀಡಬೇಕು ಎಂಬುದರ ಬಗ್ಗೆ ಚರ್ಚಿಸಿ ನಂತರ ಪ್ರಕಟಿಸಲಾಗುವುದು ಎಂದರು.
ಎಂ.ಜಿ.ರಸ್ತೆ, ಬಿಗ್ರೇಡ್ ರಸ್ತೆ, ಇಂದಿರಾನಗರ, ಕೋರಮಂಗಲ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಸುಖಾಸುಮ್ಮನೆ ಗುಂಪುಗೂಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.