700ರ ಸನಿಹದಲ್ಲಿ ಕೊರೊನಾ ಸೋಂಕಿತರು, 6 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ - ಇಂದಿನ ಕೊರೊನಾ ಪ್ರಕರಣಗಳು
ರಾಜ್ಯದಲ್ಲಿ ಇಂದು 20 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದಾಗಿ ಒಟ್ಟು ಕೊರೊನಾ ಪೀಡಿತರ ಸಂಖ್ಯೆ ರಾಜ್ಯದಲ್ಲಿ 693ಕ್ಕೆ ಏರಿಕೆಯಾಗಿದೆ.
ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 693ಕ್ಕೆ ಏರಿಕೆಯಾಗಿದ್ದು ಇಂದು 20 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಈವರೆಗೆ 29 ಮಂದಿ ಕೊರೊನಾಗೆ ಬಲಿಯಾಗಿದ್ದು, 354 ಮಂದಿ ಗುಣಮುಖರಾಗಿದ್ದಾರೆ. 6 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ 148 ಶಂಕಿತರನ್ನು ಗುರುತಿಸಿದ್ದು, ಒಟ್ಟು 1,089 ಮಂದಿಯನ್ನು ನಿಗದಿತ ಸ್ಥಳಗಳಲ್ಲಿ ಪ್ರತ್ಯೇಕಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಫೀವರ್ ಕ್ಲಿನಿಕ್ನಲ್ಲಿ 139 ವ್ಯಕ್ತಿಗಳನ್ನು ಇಂದು ತಪಾಸಣೆ ಮಾಡಲಾಗಿದ್ದು, ಈವರೆಗೂ ಒಟ್ಟಾರೆ 6655 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.
ರಾಜ್ಯಾದ್ಯಂತ 528 ಫೀವರ್ ಕ್ಲಿನಿಕ್ಗಳಲ್ಲಿ 16,849 ವ್ಯಕ್ತಿಗಳ ತಪಾಸಣೆ ನಡೆದಿದ್ದು, ರಾಜ್ಯಾದ್ಯಂತ ಈವರೆಗೆ 2,42,071 ಮಂದಿಗೆ ತಪಾಸಣೆ ನಡೆಸಲಾಗಿದೆ.
ವಸತಿ, ಆರೋಗ್ಯ, ಪೊಲೀಸ್, ಸರ್ಕಾರಿ ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತರು ಸಿಲುಕಿಕೊಂಡಿರುವ ಪ್ರವಾಸಿಗರು, ಕ್ವಾರಂಟೈನ್ನಲ್ಲಿರುವ ವ್ಯಕ್ತಿಗಳಿಗೆ ಹೋಟೆಲ್ ಮತ್ತು ರೆಸ್ಟೋರೆಂಟ್ ಮೂಲಕ ಆಹಾರವನ್ನು ಒದಗಿಸುವುದನ್ನು ಹೊರತುಪಡಿಸಿ ಇತರ ಸೇವೆಗಳನ್ನು ನಿಷೇಧಿಸಲಾಗಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್ಗಳು, ಅಡಿಗೆ ಮನೆಗಳಲ್ಲಿ
ಸಿದ್ಧಪಡಿಸಿದ ಆಹಾರವನ್ನು ಪಾರ್ಸೆಲ್ ಮತ್ತು ಮನೆಗಳಿಗೆ ವಿತರಣೆಗೆ ಮಾತ್ರ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ.