ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ದೀಪಾವಳಿ ಸಂಭ್ರಮದ ಮನೆ ಮಾಡಿದ್ದು, ಪೌರ ಕಾರ್ಮಿಕರು ಹಬ್ಬದ ದಿನದಲ್ಲೂ ತಮ್ಮ ಕರ್ತವ್ಯದೊಂದಿಗೆ ದೀಪಾವಳಿ ಆಚರಿಸಿದ್ದಾರೆ.
ಕರ್ತವ್ಯದಲ್ಲಿ ಹಬ್ಬದ ಸಂಭ್ರಮ ಕಂಡ ಪೌರಕಾರ್ಮಿಕರು ಹೆಚ್ಚು ಕಸ ರಾಶಿ ಬಿದ್ದಿರುವ ಸ್ಥಳಗಳಲ್ಲಿ ಕಸ ತೆರವುಗೊಳಿಸಿ, ಅಲ್ಲಿ ಬಣ್ಣಬಣ್ಣದ ರಂಗೋಲಿ ಬಿಡಿಸುವ ಮೂಲಕ ಹಬ್ಬ ಆಚರಿಸಿದ್ದಾರೆ. ಪಟಾಕಿ ಕಸ, ಬಾಳೆಗೊನೆ, ಹೂ-ಹಣ್ಣುಗಳ ತ್ಯಾಜ್ಯ ಅಲ್ಲಲ್ಲಿ ರಾಶಿ ಬಿದ್ದು ಬ್ಲಾಕ್ ಸ್ಪಾಟ್ಗಳ ಸಂಖ್ಯೆ ಹೆಚ್ಚಾಗಿದ್ದು, ಪೌರ ಕಾರ್ಮಿಕರು ತೆರವು ಕಾರ್ಯದಲ್ಲಿ ನಿರತರಾದರು.
ಬಿಬಿಎಂಪಿ ವಿಶೇಷ ಆಯುಕ್ತರಾದ ರಂದೀಪ್ ಹಾಗೂ ಆಯುಕ್ತರಾದ ಬಿ. ಹೆಚ್. ಅನಿಲ್ ಕುಮಾರ್ ಇಂದು ಬೆಳಗ್ಗೆ ಸ್ವಚ್ಛತೆಗಾಗಿ ಹಾಗೂ ದೀಪಾವಳಿ ರಂಗೋಲಿ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೂ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರದಿದ್ದರೂ ಪೌರ ಕಾರ್ಮಿಕರು ಸ್ವತಃ ತಾವೇ ಸೇರಿ ನಗರದ ಹಲವು ವಾರ್ಡ್ಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ರಂಗೋಲಿ ಹಾಕಿದ್ದಾರೆ.
ಗೋವಿಂದರಾಜ ನಗರ ವಾರ್ಡ್, ಮೂಡಲಪಾಳ್ಯ, ಮಾರೇನಹಳ್ಳಿ, ದೇವಸಂದ್ರ, ಶೇಷಾದ್ರಿಪುರಂ, ಚಂದ್ರಾ ಲೇಔಟ್ಗಳಲ್ಲಿ ಸ್ವಚ್ಛತಾ ಕಾರ್ಯ ಯಶಸ್ವಿಯಾಗಿ ನಡೆದಿದೆ ಎಂದು ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.
.