ಬೆಂಗಳೂರು :ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಇದನ್ನು ಸರಿದೂಗಿಸಲು ಸದ್ಯದಲ್ಲೇ 2 ಸಾವಿರಕ್ಕೂ ಹೆಚ್ಚು ಕಾನ್ಸ್‌ಟೇಬಲ್ ನೇಮಕಾತಿಗೆ ನೋಟಿಫಿಕೇಷನ್ ಕೊಡಲಾಗುತ್ತದೆ ಎಂದು ಡಿಜಿ-ಐಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ. ಕೋರಮಂಗಲದ ಕೆಎಸ್ಆರ್ಪಿ ಮೂರನೇ ಬೆಟಾಲಿಯನ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಕವಾಯತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶೀಘ್ರದಲ್ಲೇ 2 ಸಾವಿರಕ್ಕೂ ಹೆಚ್ಚು ಕಾನ್ಸ್‌ಟೇಬಲ್ ನೇಮಕಾತಿ ನೋಟಿಫಿಕೇಷನ್ : ಡಿಜಿ ಪ್ರವೀಣ್ ಸೂದ್ ಈಗಾಗಲೇ ಚುನಾವಣೆ ಹಿನ್ನೆಲೆ ಕೆಲಸಗಳು ಶುರುವಾಗಿವೆ. ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ದವಾಗಿವೆ. ಎಲೆಕ್ಷನ್ಗೆ ಹೆಚ್ಚು ಭದ್ರತೆ ಬೇಕಾಗುತ್ತದೆ. ಹಾಗಾಗಿ, ನಾವೂ ಕೂಡ ಸಿದ್ದರಾಗಬೇಕು. ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಈಗಾಗಲೇ 4,000 ಪೊಲೀಸ್ ಕಾನ್ಸ್‌ಟೇಬಲ್ ಪೊಲೀಸ್ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ನಮ್ಮ ಎಲ್ಲಾ ಇಲಾಖಾ ಸಿಬ್ಬಂದಿ ಕಠಿಣ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿಭಟನೆ, ಎಲೆಕ್ಷನ್, ಹಿಜಾಬ್ ವಿವಾದ ಸೇರಿದಂತೆ ಎಲ್ಲಾ ಕಠಿಣ ಸಮಯದಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದೀರಿ. ಚುನಾವಣೆ ಹಿನ್ನೆಲೆ ಕೆಎಸ್ಆರ್ಪಿ ಸಿಬ್ಬಂದಿ ಬೇರೆ ಬೇರೆ ರಾಜ್ಯಗಳಿಗೂ ಹೋಗಿ ಬಂದಿದ್ದೀರಿ. ಎಲ್ಲರಿಗೂ ವಂದನೆಗಳು. ಇದೇ ರೀತಿ ಮುಂದಿನ ವರ್ಷ ಕೂಡ ಸಿದ್ದರಾಗಿರಬೇಕು ಎಂದರು.
ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿದೆ :ಪಿಎಸ್ಐ ನೇಮಕಾತಿ ಅಕ್ರಮ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮೊದಲ ಬಾರಿ 545 ಪಿಎಸ್ಐ ನೇಮಕಾತಿ ಅಕ್ರಮ ಎನ್ನಲಾದ ಪ್ರಕರಣ ಸಂಬಂಧ ಮಾಹಿತಿ ಬಂದ ಬಳಿಕ ಒಂದು ತಿಂಗಳು ವಿಚಾರಣೆ ನಡೆಸಲಾಗಿತ್ತು. ವಿಚಾರ ಗಮನಕ್ಕೆ ಬಂದ ನಂತರ ಸಾಕ್ಷಿ ಸಿಕ್ಕ ತಕ್ಷಣ ಎಫ್ಐಅರ್ ದಾಖಲಿಸಲಾಗಿತ್ತು. ಯಾರು ಆಯ್ಕೆಯಾಗಿದ್ದಾರೆ, ಯಾರು ಆಯ್ಕೆಯಾಗಿಲ್ಲ ಎಲ್ಲದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಅಕ್ರಮದ ಹಿಂದಿರುವ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಆಗಲಿದೆ. ಈಗಾಗಲೇ ಹಲವರನ್ನ ಬಂಧಿಸಲಾಗಿದೆ. ತಪ್ಪಿತಸ್ಥರನ್ನು ಮುಂದಿನ ಪೊಲೀಸ್ ಪರೀಕ್ಷೆ ಬರೆಯದಂತೆ ಮಾಡುತ್ತೇವೆ. ಯಾರನ್ನು ಹಾಗೆ ಬಿಡಲ್ಲ. ಪ್ರತಿಯೊಂದು ಉತ್ತರ ಪತ್ರಿಕೆಯನ್ನ ಮೂರು ಬಾರಿ ಪರಿಶೀಲಿಸಲಿದ್ದೇವೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಏನು ಆಗಲ್ಲ. ಆದ್ರೆ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿದೆ ಎಂದರು.
ಸಮಾಜದ ಶಾಂತಿ ಕೆಡಿಸುವವರು ಯಾರೇ ಆಗಿದ್ರೂ ಬಿಡಲ್ಲ : ಹುಬ್ಬಳಿ ಗಲಭೆ ಪ್ರಕರಣದಲ್ಲಿ ಯಾರೆಲ್ಲಾ ತಪ್ಪು ಮಾಡಿದ್ದಾರೆ ಅವರಿಗೆ ಕಠಿಣ ಶಿಕ್ಷೆಯಾಗುತ್ತದೆ. ನೇರವಾಗಿ ಭಾಗಿಯಾದವರನ್ನ ಬಂಧಿಸಲಾಗಿದೆ. ಪರೋಕ್ಷವಾಗಿ ಯಾರ ಕೈವಾಡವಿದೆ ಅದನ್ನ ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಅವರನ್ನ ಕೂಡ ಬಂಧಿಸಲಾಗುತ್ತದೆ. ಸಾಮಾಜಿಕ ಮಾಧ್ಯಮವನ್ನು ಬಹಳ ಎಚ್ಚರಿಕೆಯಿಂದ ಬಳಕೆ ಮಾಡಬೇಕು. ಹಿಂದೂ-ಮುಸ್ಲಿಂರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬೇಡದ ವಿಚಾರಗಳು ಗಮನ ಸೆಳೆಯುತ್ತಿವೆ. ಸಮಾಜದ ಶಾಂತಿ ಕೆಡಿಸುವವರು ಯಾರೇ ಆಗಿದ್ದರೂ, ಅವ್ರನ್ನ ಬಿಡಲ್ಲ ಎಂದು ಎಚ್ಚರಿಕೆ ನೀಡಿದರು.