ಕರ್ನಾಟಕ

karnataka

ETV Bharat / city

ಈವರೆಗೆ ಜೆಡಿಎಸ್ ತೊರೆದಿಲ್ಲ: ಬಿಜೆಪಿ ಸೇರುವುದು ವದಂತಿ ಎಂದ ಎಂಎಲ್​ಸಿ ಮನೋಹರ್

ಅಧಿಕಾರವಿದ್ದಾಗ ಅವಕಾಶ ಕೊಡದ ಮಾಜಿ ಸಿಎಂ ಹೆಚ್​ ​ಡಿ ಕುಮಾರಸ್ವಾಮಿ ಮೇಲೆ ಅಸಮಾಧಾನವಿದೆ. ನಾವು ಕೆಲಸಕ್ಕೆ ಬಾರದವರಂತೆ. ಹೀಗಾಗಿ ಬೇರೆ ಪಕ್ಷದವರು ಕರೆದಿರುವುದು ನಿಜ. ಹೆಚ್.ಡಿ ದೇವೇಗೌಡರೊಂದಿಗೆ ಸಮಾಲೋಚಿಸಿದ ಮೇಲೆ ಪಕ್ಷದಲ್ಲಿರಬೇಕಾ? ಅಥವಾ ಬೇರೆ ಹೋಗಬೇಕಾ? ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವೆ ಎಂದು ಎಂಎಲ್​​ಸಿ ಸಿ.ಆರ್​​ ಮನೋಹರ್​​ ಹೇಳಿದ್ದಾರೆ.

MLC Manohar
ವಿಧಾನ ಪರಿಷತ್ ಸದಸ್ಯ ಸಿ.ಆರ್.ಮನೋಹರ್

By

Published : Nov 7, 2021, 1:11 PM IST

ಆನೇಕಲ್ (ಬೆಂಗಳೂರು): ಜೆಡಿಎಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎನ್ನುವ ವದಂತಿಯೊಂದು ಹಬ್ಬಿದ್ದು, ಆ ರೀತಿಯ ಆಲೋಚನೆಯನ್ನು ತಾವು ಮಾಡಿಲ್ಲವೆಂದು ವಿಧಾನ ಪರಿಷತ್ ಸದಸ್ಯ ಸಿ.ಆರ್ ಮನೋಹರ್ ಹೇಳಿದ್ದಾರೆ.

ಬಿಜೆಪಿ ಸೇರುವ ವದಂತಿ ಕುರಿತು ಎಂಎಲ್​ಸಿ ಮನೋಹರ್ ಸ್ಪಷ್ಟನೆ ನೀಡಿರುವುದು..

ಸರ್ಜಾಪುರ ಪಟ್ಟಣದಲ್ಲಿರುವ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ ಅಧಿಕಾರದಲ್ಲಿದ್ದಾಗ ನನ್ನನ್ನು ಕಡೆಗಣಿಸಲಾಗಿತ್ತು. ಆಗಲೂ ಪಕ್ಷಕ್ಕೆ ಮುಜುಗರವುಂಟು ಮಾಡುವ ಕೆಲಸ ನನ್ನಿಂದ ಆಗಿಲ್ಲ. ವಿಧಾನ ಪರಿಷತ್ ಸದಸ್ಯತ್ವದ ಅವಧಿ ಎರಡು ತಿಂಗಳಿದೆ. ಅವಧಿ ಮುಗಿದ ಬಳಿಕ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ಬಳಿ ಸಮಾಲೋಚಿಸಿ ಮುಂದಿನ‌ ನಿರ್ಧಾರ ಕೈಗೊಳುತ್ತೇನೆ. ಈಗಾಗಲೇ ಇತರೆ ಪಕ್ಷದವರು ನನ್ನನ್ನು ಆಹ್ವಾನಿಸಿರುವುದು ನಿಜ. ಆದರೆ ಈ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಇವರಿಂದ ಪಕ್ಷಕ್ಕೆ ಪ್ರಯೋಜನವಿಲ್ಲ ಎಂದು ಮಾತನಾಡಿರುವ ಕುರಿತು ಪ್ರತಿಕ್ರಿಯಿಸಿ, ಹಾಗೆ ಮಾತನಾಡಿದ್ದರೆ ಅದು ಸರಿಯಲ್ಲ. ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಅವರಿಂದ ಈ ಮಾತನ್ನು ನಿರೀಕ್ಷಿಸಿರಲಿಲ್ಲ. ಅವರ ಕುರಿತು ಮಾತನಾಡುವಷ್ಟು ದೊಡ್ಡವರು ನಾವಲ್ಲ ಎಂದರು.

ಕೆಲವು ದಿನಗಳ ಹಿಂದೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ದೂರವಾಣಿ ಮೂಲಕ ಮಾತನಾಡಬೇಕೆಂದು ಹೇಳಿದ್ದರು. ಆದರೆ ಈವರೆಗೆ ಯಾವ ನಾಯಕರು ನನ್ನನ್ನು ಸಂಪರ್ಕಿಸಿಲ್ಲ ಎಂದು ಜೆಡಿಎಸ್ ಕುರಿತು ತಮಗಿರುವ ಅಸಹನೆಯನ್ನು ಮನೋಹರ್​ ವ್ಯಕ್ತಪಡಿಸಿದರು.

ABOUT THE AUTHOR

...view details