ನೆಲಮಂಗಲ: ಹುಟ್ಟುಹಬ್ಬದ ಆಚರಣೆಗಳಲ್ಲಿ ಮೋಜು ಮಸ್ತಿ ಹೆಚ್ಚಿರುವುದು ಸಾಮನ್ಯ. ಆದ್ರೆ ಇಂತಹ ಆಡಂಬರದ ಜನ್ಮದಿನ ಆಚರಣೆಗೆ ಬ್ರೇಕ್ ಹಾಕಿ ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸುವ ಮೂಲಕ ನೆಲಮಂಗಲ ಶಾಸಕ ಮಾದರಿಯಾಗಿದ್ದಾರೆ.
ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಿದ ಶಾಸಕ ಹೌದು, ಬೆಂಗಳೂರು ಹೊರವಲಯದ ನೆಲಮಂಗಲ ಕ್ಷೇತ್ರದ ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ ತಮ್ಮ ಹುಟ್ಟುಹಬ್ಬವನ್ನು ಮಾಡಿಕೊಳ್ಳದೇ, ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ. ಕೈಯಲ್ಲಿ ಡಬ್ಬ ಹಿಡಿದು ಅಂಗಡಿ ಮುಂಗಟ್ಟುಗಳಿಗೆ ತೆರಳಿ ಹಣ ಸಂಗ್ರಹಿಸುತ್ತಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಶ್ರೀನಿವಾಸಮೂರ್ತಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಅಗತ್ಯವಿದ್ದಷ್ಟು ಅನುದಾನ ಸಿಕ್ಕಿಲ್ಲ. ಸುಮಾರು 10 ಸಾವಿರ ಕೋಟಿ ಅನುದಾನಕ್ಕೆ ಒತ್ತಾಯವಿದೆ. ಆದರೆ ಕಡಿಮೆ ಮೊತ್ತದ ಹಣ ನೀಡಿರುವುದು ಕೇಂದ್ರ ಸರ್ಕಾರದ ವಿಫಲತೆಯನ್ನು ತೋರಿಸುತ್ತದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಶಾಸಕ ಶ್ರೀನಿವಾಸಮೂರ್ತಿ ಕಳೆದ ವರ್ಷದ ಹುಟ್ಟುಹಬ್ಬಕ್ಕೂ ಸಹ ಕೊಡಗು ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಿದ್ದರು. ಈ ಬಾರಿಯೂ ಸಹ ಉತ್ತರ ಕರ್ನಾಟಕ ಹಾಗೂ ಕೊಡಗು ಎರಡು ಭಾಗಗಳಿಗೆ ದೇಣಿಗೆ ಸಂಗ್ರಹಿಸಿದ್ದಾರೆ. ಈ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದೇ ವೇಳೆ ಮರಳುಕುಂಟೆ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳ 30 ಸಾವಿರ ರೂ. ವೇತನವನ್ನು ಪಂಚಾಯತಿ ಅಧ್ಯಕ್ಷ ಅಶ್ವಥ್ ರಾಜು, ತಾಲೂಕು ಪಂಚಾಯತಿ ಅಧ್ಯಕ್ಷ ನಾಗಭೂಷಣ್, ಶಾಸಕರಿಗೆ ಹಸ್ತಾಂತರಿಸಿದರು.