ಬೆಂಗಳೂರು: ಕೈಗಾರಿಕಾ ಪ್ರದೇಶಗಳಲ್ಲಿ ವಿಧಿಸುವ ತೆರಿಗೆ ಹಾಗೂ ನೂತನ ಟೌನ್‌ಶಿಪ್‌ಗಳ ನಿರ್ಮಾಣದ ಬಗ್ಗೆ ನಗರಾಭಿವೃದ್ದಿ ಇಲಾಖೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಮತ್ತು ಕೆಐಎಡಿಬಿ ಸಹಯೋಗದಲ್ಲಿ ಪ್ರಸ್ತಾವನೆ ತಯಾರಿಸಿ ಸಚಿವ ಸಂಪುಟದ ಮುಂದಿಡುವಂತೆ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಾಗೂ ನಗರಾಭಿವೃದ್ದಿ ಸಚಿವ ಬಿ.ಎ ಬಸವರಾಜ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರುಗಳು, ಹಲವಾರು ವರ್ಷಗಳಿಂದ ಕೆಐಎಡಿಬಿ ಹಾಗೂ ಕೆಎಸ್‌ಎಸ್‌ಐಡಿಸಿಯಿಂದ ಅಭಿವೃದ್ದಿ ಪಡಿಸಿರುವ ಕೈಗಾರಿಕಾ ಪ್ರದೇಶಗಳು ಹಾಗೂ ಶೆಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳಿಗೆ ಮಹಾನಗರ ಪಾಲಿಕೆಗಳು ಹಾಗೂ ಸ್ಥಳೀಯ ಸಂಸ್ಥೆಗಳಯಿಂದ ಆಸ್ತಿ ತೆರಿಗೆ ಪಾವತಿಸಲು ಬೇಡಿಕೆ ನೋಟಿಸ್ ನೀಡಲಾಗುತ್ತಿದೆ.
ಈಗಾಗಲೇ ಕೈಗಾರಿಕೆಗಳು ಸಂಕಷ್ಟದ ಪರಿಸ್ಥಿತಿಯಲ್ಲಿರುವುದರಿಂದ ಸದರಿ ಕೆಐಎಡಿಬಿ ಹಾಗೂ ಕೆಎಸ್‌ಎಸ್‌ಐಡಿಸಿ ಸಂಸ್ಥೆಗಳು ಅಭಿವೃದ್ದಿ ಹೊಂದಿದ ವಸಹಾತುಗಳನ್ನು ಸಂಬಂಧಪಟ್ಟ ಪಾಲಿಕೆಗಳಿಗೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ ಮಾಡುವ ಮೊದಲು ಹಾಗೂ ನಂತರ ಆಸ್ತಿ ತೆರಿಗೆ ವಿಧಿಸುವ ಬಗ್ಗೆ ಸಂಬಂಧಪಟ್ಟ ಕಾಯ್ದೆಗಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಆಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.