ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯ ಎರಡನೇ ದಿನವಾದ ಇಂದು ಕೆ.ಆರ್.ಪುರದ ಐಟಿಐ ವಿದ್ಯಾ ಮಂದಿರ ಶಾಲೆ, ಕೆ.ಆರ್ ಪುರ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ, ವೆಂಕಟೇಶ್ವರ ಆಂಗ್ಲ ಶಾಲೆ ಹಾಗೂ ಮಹದೇವಪುರದ ಆವಲಹಳ್ಳಿ, ಕಾಡುಗೋಡಿ ಭಾಗದ 10 ಶಾಲೆಗಳಿಗೆ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳಿಗೆ ನಿರಾತಂಕವಾಗಿ ಪರೀಕ್ಷೆ ಬರೆಯುವಂತೆ ಧೈರ್ಯ ತುಂಬಿದರು.
ರಾಜ್ಯದಲ್ಲಿ ಇಂದು ಎಸ್ಎಸ್ಎಲ್ಸಿ ಎರಡನೇ ಮತ್ತು ಕೊನೆಯ ದಿನದ ಪರೀಕ್ಷೆ ನಡೆಯುತ್ತಿದೆ. ಮೊದಲ ದಿನ ಗಣಿತ, ವಿಜ್ಞಾನ ಹಾಗು ಸಮಾಜ ವಿಷಯಗಳಿಗೆ ಪರೀಕ್ಷೆ ನಡೆದಿದೆ. ಇಂದು ಕನ್ನಡ, ಇಂಗ್ಲಿಷ್, ಹಿಂದಿ ವಿಷಯಗಳಿಗೆ ಪರೀಕ್ಷೆ ನಡೆಯುತ್ತಿದೆ ಎಂದರು.
ರಾಜ್ಯಾದ್ಯಂತ ಶೇ. 99.6 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಜಿಲ್ಲಾಧಿಕಾರಿ ಮತ್ತು ಬಿಎಒಗಳ ಜೊತೆಗೆ ಇಂದಿನ ಪರೀಕ್ಷೆ ನಡೆಸುವ ಬಗ್ಗೆ ಚರ್ಚಿಸಿದ್ದೇನೆ. ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಎಲ್ಲಾ ಮಕ್ಕಳು ಲವಲವಿಕೆಯಿಂದ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಹೇಳಿದರು.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಾಲೆಗಳು ಪುನರಾರಂಭದ ಬಗ್ಗೆ ಯೋಚನೆ ಮಾಡಿಲ್ಲ. ಶಿಕ್ಷಣ ಆಯುಕ್ತರ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದೆ. ಸೋಮವಾರ ಆಯುಕ್ತರು ವರದಿ ನೀಡಲಿದ್ದಾರೆ. ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ಅಧ್ಯಯನ ಮಾಡಿ ನಮಗೆ ವರದಿ ಕೊಡಲಿದ್ದಾರೆ. ಐಸಿಎಂಆರ್ನಿಂದಲೂ ಶಾಲೆಗಳನ್ನು ಪ್ರಾರಂಭಿಸಬಹುದು ಎಂಬ ವರದಿ ಬಂದಿದೆ. ಡಾ.ದೇವಿ ಶೆಟ್ಟಿ ಅವರು ಕೊಟ್ಟಿರುವ ವರದಿಯನ್ನು ಅಧ್ಯಯನ ಮಾಡಿ ನಂತರ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.