ಬೆಂಗಳೂರು:ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆಗೆ ಬ್ರೇಕ್, ಬೆಳಕು ಯೋಜನೆ, ಕೃಷಿಗೆ ನಿರಂತರ ವಿದ್ಯುತ್ ಪೂರೈಕೆ ಹಾಗೂ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸುವ ವ್ಯವಸ್ಥೆಗೆ ತೆರೆ ಎಳೆಯಲು ನೂರು ದಿನದ ಗುರಿಯೊಂದಿಗೆ ಹಲವು ಕಾರ್ಯಕ್ರಮಗಳನ್ನು ಸಚಿವ ಸುನೀಲ್ ಕುಮಾರ್ ಪ್ರಕಟಿಸಿದ್ದಾರೆ.
ಬೆಳಕು ಯೋಜನೆ
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಭೇಟಿ ನೀಡಿ ಕಾರ್ಯಕರ್ತರ ಅಹವಾಲು ಆಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಧನ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ.
ರಾಜ್ಯದ ಜನತೆಗೆ ಅನುಕೂಲ ಆಗುವ ದೃಷ್ಟಿಯಿಂದ ಯೋಚಿಸಿ ಎರಡೂ ಇಲಾಖೆಯಿಂದ ನೂರು ದಿನದ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮನೆ ಕಟ್ಟಿ ವಿದ್ಯುತ್ ಸಂಪರ್ಕ ಪಡೆಯಲಾಗದವರಿಗೆ ವಿದ್ಯುತ್ ಪೂರೈಕೆ ಸಿಎಂ ಕನಸಾಗಿದೆ. ಹಾಗಾಗಿ ಬೆಳಕು ಯೋಜನೆಯಡಿ ನೂರು ದಿನದೊಳಗೆ NOC ಇಲ್ಲದೇ ವಿದ್ಯುತ್ ನೀಡಲು ನಿರ್ಧರಿಸಲಾಗಿದೆ ಎಂದರು.
ಕೃಷಿ ಪಂಪ್ ಸೆಟ್ ಯೋಜನೆ
ಟ್ರಾನ್ಸ್‌ಫಾರ್ಮರ್ ಬ್ಯಾಂಕ್ ಮಾಡಲು ನಿರ್ಧರಿಸಿದ್ದು, ಟಿಸಿ ಕೆಟ್ಟುಹೋದಲ್ಲಿ ಬದಲಿಸಲು ದಿನಗಳ ಲೆಕ್ಕದಲ್ಲಿ ಸಮಯ ತೆಗೆದುಕೊಳ್ಳಲಾಗುತ್ತದೆ. ಅದನ್ನು ಮಾರ್ಪಡಿಸಬೇಕಿದೆ. ಹಾಗಾಗಿ TC ಕೆಟ್ಟಲ್ಲಿ ಮುಂದಿನ ದಿನದಲ್ಲಿ 24 ಗಂಟೆಯಲ್ಲಿ ಟಿ.ಸಿ ಬದಲಾಯಿಸಲು ನಿರ್ಧರಿಸಲಾಗಿದೆ.
ಗಂಗಾ ಕಲ್ಯಾಣ ಯೋಜನೆಯಲ್ಲಿ ಬಡ ರೈತರಿದ್ದಾರೆ. ನೀರಾವರಿ ನಿಗಮದ ಮೂಲಕ ಬೋರ್ ಕೊರೆದಿದ್ದು, ನಿಗಮದಿಂದ ಹಣ ಭರ್ತಿ ಮಾಡಬೇಕು. ನಿಗಮ ಹಣ ಪಾವತಿಸಿದ 30 ದಿನದಲ್ಲಿ ಸಂಪರ್ಕ ಕಲ್ಪಿಸಲು ನಿರ್ಧರಿಸಲಾಗಿದೆ. ಹಳ್ಳಿಗಳಿಗೆ ಕೃಷಿ ಪಂಪ್ ಸೆಟ್ ಯೋಜನೆ ಮೂಲಕ ಏಳು ಗಂಟೆ ವಿದ್ಯುತ್ ಪೂರೈಕೆಗೆ ಚಿಂತನೆ ನಡೆಸಲಾಗುದೆ. ಉತ್ತರ ಕರ್ನಾಟಕದ ಏಳು ಜಿಲ್ಲೆಯಲ್ಲಿ ನಿರಂತರ ವಿದ್ಯುತ್ ಪೂರೈಸಲು 60ಕ್ಕೂ ಹೆಚ್ಚು ಸಬ್ ಸ್ಟೇಷನ್ ಮಾಡಲು ತೀರ್ಮಾನಿಸಲಾಗಿದೆ ಎಂದರು.
ವರ್ಗಾವಣೆ ದಂಧೆಗೆ ಬ್ರೇಕ್
ಲೈಮ್ ಮ್ಯಾನ್ ನೇಮಕ, ಜೆಇ ನೇಮಕಾತಿ ಮಾಡಲಾಗುತ್ತದೆ. ಇದರ ಜೊತೆ, ವರ್ಗಾವಣೆ ದಂಧೆಗೆ ಬ್ರೇಕ್ ಹಾಕಲು ನಿರ್ಧರಿಸಿದ್ದು, ವರ್ಷವಿಡೀ ವರ್ಗಾವಣೆ ನಡೆಸುವುದಕ್ಕೆ ನಿರ್ಬಂಧ ವಿಧಿಸಿ ಅಗತ್ಯವಿದ್ದರಷ್ಟೇ ಸಿಎಂ ಸಲಹೆ ಮೇರೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪ್ರೀಪೇಯ್ಡ್ ವಿದ್ಯುತ್ ಯೋಜನೆ
ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ಬಾಕಿ ಬಿಲ್ ಜಾಸ್ತಿ ಇದೆ. ಇದರಿಂದ ಸರ್ಕಾರಕ್ಕೆ ಹೊರೆಯಾಗಲಿದೆ. ವಿದ್ಯುತ್ ಬಳಕೆ ಮಾಡಿದರೆ ಬಿಲ್ ಕಟ್ಟುವುದು ಎಲ್ಲರಿಗೂ ಅನ್ವಯವಾಗಲಿದೆ ಹಾಗಾಗಿ ಸರ್ಕಾರಿ ಕಚೇರಿಗೆ ಪ್ರೀಪೇಯ್ಡ್ ವಿದ್ಯುತ್ ಯೋಜನೆ ಆರಂಭಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಸರ್ಕಾರಿ ಕಚೇರಿಯಲ್ಲಿ ಪ್ರೀಪೇಯ್ಡ್ ಮೀಟರ್ ಅಳವಡಿಸಲಾಗುತ್ತದೆ. ಸರ್ಕಾರಿ ಕಚೇರಿಯವರು ಸರಿಯಾಗಿ ಬಿಲ್ ಪಾವತಿಸಿದರೆ ನಮಗೆ ಹೊರೆ ತಪ್ಪಲಿದೆ ಎಂದು ಸಚಿವರು ತಿಳಿಸಿದರು.
ಪೆಟ್ರೋಲ್ ದರ ಹೆಚ್ಚಳ ವಿಚಾರವಾಗಿ ಮಾತನಾಡಿದ ಸಚಿವರು, ಪೆಟ್ರೋಲ್, ಡೀಸೆಲ್ ಸೆಸ್ ದರ ಕಡಿಮೆ ಮಾಡುವ ವಿಚಾರ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನಿರ್ಧಾರ ಮಾಡಲಿದ್ದಾರೆ. ಆದರೆ, ರಾಜ್ಯಾದ್ಯಂತ ಎಲೆಕ್ಟ್ರಿಕ್ ವೆಹಿಕಲ್ ರೀಚಾರ್ಜ್ ಸೆಂಟರ್ ತೆರೆಯಲು ನಿರ್ಧರಿಸಲಾಗಿದೆ. ಜಿಲ್ಲಾ ಕೇಂದ್ರ ಮತ್ತು ಪ್ರವಾಸೋದ್ಯಮ ಕೇಂದ್ರಗಳಲ್ಲಿ ರೀಚಾರ್ಜ್ ಸೆಂಟರ್ ತೆರೆಯುತ್ತೇವೆ ಎಂದು ಮಾಹಿತಿ ನೀಡಿದರು.
ಸಾಧಕರನ್ನ ಗುರುತಿಸಿ ಪ್ರಶಸ್ತಿ ನೀಡುವ ಕೆಲಸ ಆಗಬೇಕು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಹಾಕೋ ಸಂಸ್ಕೃತಿ ಕಡಿಮೆ ಆಗಬೇಕು. ಸಾಧಕರನ್ನ ಗುರುತಿಸಿ ಪ್ರಶಸ್ತಿ ನೀಡುವ ಕೆಲಸ ಆಗಬೇಕು. ಶಕ್ತಿ ಇರುವವರು ಬೆಂಗಳೂರಿಗೆ ಬಂದು ಅರ್ಜಿ ಹಾಕುತ್ತಾರೆ, ಇಲ್ಲದವರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಕಲಾವಿದರನ್ನ ಗುರುತಿಸಲು ಡೇಟಾ ಬ್ಯಾಂಕ್ ಮಾಡಲು ನಿರ್ಧರಿಸಿದ್ದೇವೆ. 100 ದಿನದಲ್ಲಿ ಡೇಟಾ ಸಂಗ್ರಹ ಮಾಡಲಾಗುತ್ತದೆ. ಇನ್ಮುಂದೆ ನಾವೇ ಸಾಧಕರನ್ನ ಗುರುತಿಸಿ ಪ್ರಶಸ್ತಿ ನೀಡುವ ಕೆಲಸ ಮಾಡುತ್ತೇವೆ ಎಂದರು.