ಬೆಂಗಳೂರು:ದೇವಾಲಯದ ವ್ಯಾಪ್ತಿಯಲ್ಲಿ ಹಿಂದೂಯೇತರರ ವ್ಯಾಪಾರ ನಿರ್ಬಂಧಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಕಾಪು ಸೇರಿದಂತೆ ಹಲವೆಡೆ ಹಿಂದೂ ಜಾತ್ರೆಗಳಲ್ಲಿ ಹಿಂದೂಯೇತರರ ವರ್ತಕರಿಗೆ ಅಂಗಡಿ ತೆರೆಯಲು ಗುತ್ತಿಗೆ ನೀಡದಿರುವ ನಿರ್ಬಂಧ ಹಾಕುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ ಪ್ರಸ್ತಾಪಕ್ಕೆ ಮಾಧುಸ್ವಾಮಿ ಈ ರೀತಿಯಾಗಿ ಉತ್ತರ ನೀಡಿದ್ದಾರೆ.
ರೂಲ್ ಆಫ್ ಲಾ ಮೇಲೆ ಸರ್ಕಾರ ನಡೆಯಲಿದೆ. 2002ರಲ್ಲಿಯೇ ಈ ಬಗ್ಗೆ ರೂಲ್ ಮಾಡಲಾಗಿದೆ. ದೇವಾಲಯ ಆಡಳಿತ ಮಂಡಳಿಯವರು ಈ ರೂಲ್ ಅನ್ನು ಉಲ್ಲೇಖಿಸಿ ಹಿಂದೂಯೇತರರಿಗೆ ಮಳಿಗೆ ತೆರೆಯುವ ಗುತ್ತಿಗೆ ತಡೆದಿದ್ದಾರೆ. ಇದರಲ್ಲಿ ಸರ್ಕಾರದ ಯಾವುದೇ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು. ನೀವೇ ಮಾಡಿರುವ ಕಾಯ್ದೆಯಂತೆ ನಾವು ನಡೆದುಕೊಳ್ಳುತ್ತಿದ್ದೇವೆ. ಅದನ್ನು ನೀವು ಹೇಗೆ ತಡೆಯುತ್ತೀರಿ? ಎಂದು ಅಲ್ಲಿನ ಆಡಳಿತ ಮಂಡಳಿಯವರು ಪ್ರಶ್ನೆ ಮಾಡುತ್ತಿದ್ದಾರೆ.