ಬೆಂಗಳೂರು: ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡಿನ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಿಲುವಿನಲ್ಲಿ ಮೂಡಿರುವ ವೈರುಧ್ಯ ರಾಷ್ಟ್ರೀಯ ಪಕ್ಷಗಳ ಬದ್ಧತೆಯನ್ನೇ ಪ್ರಶ್ನಿಸುವಂತಿದೆ. 2013ರಲ್ಲಿ ಚಾಲನೆ ಸಿಕ್ಕ ಕರ್ನಾಟಕದ ಮಹತ್ವದ ನೀರಾವರಿ ಯೋಜನೆ 2022 ಆದರೂ ಈಗಲೂ ಆರಂಭಿಕ ಹಂತದಲ್ಲೇ ಇರುವುದು ವಿಪರ್ಯಾಸ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭ ಯೋಜನೆ ಡಿಪಿಆರ್ ಸಿದ್ದವಾಗಿದ್ದು, ಈಗ ಅದೇ ಕಾಂಗ್ರೆಸ್ ಪ್ರತಿಪಕ್ಷದಲ್ಲಿದ್ದು, ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ನಡೆಸುವ ಹಂತ ತಲುಪಿದೆ.
ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ ಸಹ ಯೋಜನೆ ಅನುಷ್ಠಾನಕ್ಕೆ 1000 ಕೋಟಿ ರೂ. ಅನುದಾನ ಸಹ ಮೀಸಲಿಟ್ಟಿದೆ. ರಾಜ್ಯದಲ್ಲಿ ಮೇಕೆದಾಟು ಯೋಜನೆ ಜಾರಿ ಆಗಲೇಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದು ಕುಳಿತಿದೆ. ಇನ್ನೊಂದೆಡೆ ಬಿಜೆಪಿ ಸರ್ಕಾರ ಸಹ ಯೋಜನೆ ಜಾರಿಗೆ ಬದ್ದ ಎಂದು ಹೇಳುತ್ತಿದೆ. ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ರಾಜ್ಯ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಮಾಡಿಕೊಂಡರು ಸಹ ಯೋಜನೆ ಜಾರಿ ವಿಚಾರದಲ್ಲಿ ಒಮ್ಮತದ ನಿಲುವು ಹೊಂದಿದ್ದಾರೆ.
ತಮಿಳುನಾಡು ಕ್ಯಾತೆ: ಆದರೆ ಇನ್ನೊಂದೆಡೆ ತಮಿಳುನಾಡಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಿಲುವು ಇದಕ್ಕೆ ವಿರುದ್ಧವಾಗಿದೆ. ಎರಡು ರಾಜ್ಯಗಳ ನಡುವಿನ ವಿವಾದ ಸಹಜವಾಗಿ ಪ್ರಾದೇಶಿಕವಾಗಿ ಪಕ್ಷಗಳ ನಿಲುವನ್ನು ಪ್ರತ್ಯೇಕವಾಗಿಯೇ ವ್ಯಕ್ತಪಡಿಸುತ್ತವೆ. ರಾಷ್ಟ್ರೀಯ ಪಕ್ಷವಾಗಿ ಒಂದೇ ನಿಲುವನ್ನು ತಳೆಯುವುದು ಕಷ್ಟ. ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯವಿರುವ ಸಂದರ್ಭದಲ್ಲಿ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಹಾಗೂ ಬಿಜೆಪಿ ಅಧಿಕಾರ ಹಿಡಿಯುವ ಮಟ್ಟಿನ ಸಾಮರ್ಥ್ಯವನ್ನು ಹೊಂದಿವೆ.