ಬೆಂಗಳೂರು:ನಗರದಲ್ಲಿ ಪಾಲಿಕೆ ಒಡೆತನದ ಆಸ್ತಿಗಳ ವಿಚಾರವಾಗಿ ಒಟ್ಟಾರೆ ಆಸ್ತಿ, ಗುತ್ತಿಗೆ ನೀಡಿರುವ ಆಸ್ತಿಗಳು, ಪಾಲಿಕೆಗೆ ವಶಕ್ಕೆ ಪಡೆದಿರುವ ಆಸ್ತಿಗಳು, ಪಾಲಿಕೆ ಆಸ್ತಿಗಳ ಸಂರಕ್ಷಣೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಬಿಬಿಎಂಪಿ ಮೇಯರ್ ಅಧ್ಯಕ್ಷತೆಯಲ್ಲಿ ಇಂದು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಯಿತು.
ಈ ಸಭೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಒಡೆತನಕ್ಕೆ ಒಳಪಟ್ಟ ಎಲ್ಲಾ ಆಸ್ತಿಗಳ ದಾಖಲಾತಿಗಳನ್ನು ಒಂದೆಡೆ ಸಂಗ್ರಹಿಸಿ ಡಿಜಿಟಲೈಸೇಷನ್ ಮಾಡಿ ಸುಸಜ್ಜಿತವಾದ “ಸ್ಟ್ರಾಗ್ ರೂಂ” ನಿರ್ಮಿಸಬೇಕು. ಅದಕ್ಕೆ ಒಬ್ಬ ಅಧಿಕಾರಿಯನ್ನು ನಿಯೋಜಿಸುವ ಕುರಿತು ಮೇಯರ್ ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ. ಸಭೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಪಾಲಿಕೆ ಒಡೆತನದ 7,906 ಆಸ್ತಿಗಳ ಪೈಕಿ 324 ಆಸ್ತಿಗಳನ್ನು ಗುತ್ತಿಗೆ ನೀಡಲಾಗಿದ್ದು, 165 ಆಸ್ತಿಗಳ ಗುತ್ತಿಗೆ ಅವಧಿ ಚಾಲ್ತಿಯಲ್ಲಿದೆ. 159 ಆಸ್ತಿಗಳ ಗುತ್ತಿಗೆ ಅವಧಿ ಮುಗಿದಿದ್ದು, ಅದರಲ್ಲಿ ಕೆಲವನ್ನು ಹಸ್ತಾಂತರ ಮಾಡಿಕೊಳ್ಳಲಾಗಿದೆ. ಕೆಲವನ್ನು ಹಸ್ತಾಂತರ ಮಾಡಿಕೊಳ್ಳಬೇಕಿದೆ. ಆ ಬಗ್ಗೆ ಸೂಕ್ತ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಾಲಿಕೆ ಆಸ್ತಿಗಳಿಗೆ ಫೆನ್ಸಿಂಗ್ ಮಾಡಲು ಪಾಲಿಕೆ ಆಯವ್ಯಯದಲ್ಲಿ 20 ಕೋಟಿ ರೂ. ಮೀಸಲಿಡಲಾಗಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದರು.