ಬೆಂಗಳೂರು:ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು ವಲಸೆ ಹೋಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ 100 ದಿನಗಳ ಉದ್ಯೋಗ ಖಾತರಿ ಯೋಜನೆ ಜಾರಿ ಮಾಡಿದೆ. ಆದರೆ, ಯೋಜನೆ ಬಹುತೇಕ ಯಾಂತ್ರೀಕರಣಗೊಂಡಿದ್ದು, ಉದ್ಯೋಗ ಖಾತರಿ ಎಂಬುದು ಕೇವಲ ಹಾಳೆಯ ಮೇಲಿನ ಲೆಕ್ಕಾಚಾರವಾಗಿದೆ.
ಕೇಂದ್ರ ಸರ್ಕಾರ 2005ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ನರೇಗಾ) ಜಾರಿಗೆ ತಂದಿದೆ. ಗ್ರಾಮೀಣಾಭಿವೃದ್ಧಿ ಯೋಜನೆಗಳ ಜಾರಿಗೆ ಹಾಗೂ ಉದ್ಯೋಗಗಳನ್ನು ಸೃಷ್ಟಿಸಲು ಸರ್ಕಾರ ಲಕ್ಷಾಂತರ ಕೋಟಿ ವ್ಯಯಿಸುತ್ತಿವೆ.
ಅದರಂತೆ ಕೃಷಿಗೆ ಪೂರಕವಾಗದ ಕೆರೆ ಹೂಳೆತ್ತುವ, ರಸ್ತೆ, ಕಾಲುವೆ ನಿರ್ಮಿಸುವ, ಚೆಕ್ ಡ್ಯಾಮ್ಗಳು ಹಾಗೂ ಮಳೆ ನೀರು ಇಂಗು ಗುಂಡಿಗಳನ್ನು ನೆಡುತೋಪುಗಳನ್ನು ನಿರ್ಮಿಸುವ ಮತ್ತಿತರೆ ಕೆಲಸಗಳೂ ನಡೆಯುತ್ತಿವೆ. ಆದರೆ, ಈ ಕಾಮಗಾರಿಗಳಲ್ಲಿ ಕಾರ್ಮಿಕರಿಗಿಂತ ಯಂತ್ರಗಳೇ ಹೆಚ್ಚು ಸದ್ದು ಮಾಡುತ್ತಿವೆ. ಬಹುತೇಕ ಕಾಮಾಗಾರಿಗಳು ಜೆಸಿಬಿ, ಟಿಪ್ಪರ್, ಟ್ರ್ಯಾಕ್ಟರ್ಗಳ ಸಹಾಯದಲ್ಲಿಯೇ ನಡೆಯುತ್ತಿದ್ದು, ಕಾರ್ಮಿಕರ ಸಂಖ್ಯೆ ಅತ್ಯಂತ ಕಡಿಮೆ ಇದೆ.
ನರೇಗಾ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳು ಕಾರ್ಮಿಕರಿಂದಲೇ ನಡೆಯಬೇಕು. ಆದರೆ, ಯೋಜನೆಯಡಿ ನೀಡುವ ಕೂಲಿ ಅಥವಾ ಸಂಭಾವನೆ ಹಿಂದಿನಿಂದಲೂ ತೀರಾ ಕಡಿಮೆ ಇದೆ. ಹೊಸ ಪರಿಷ್ಕೃತ ಕೂಲಿ ದಿನಕ್ಕೆ 271 ರೂಪಾಯಿ ಕೊಡಲಾಗುತ್ತದೆ. ಹೀಗಾಗಿ, ಮೊದಲಿನಿಂದಲೂ ನರೇಗಾ ಕಾಮಗಾರಿಗಳಿಗೆ ಕೂಲಿ ಕಾರ್ಮಿಕರು ಹೋಗುತ್ತಿಲ್ಲ. ಇನ್ನು ಬಂದ ಯೋಜನೆಗಳನ್ನು ಕೈಬಿಡುವುದೇಕೆ ಎಂಬ ನಿಟ್ಟಿನಲ್ಲಿ ಗ್ರಾಪಂ ಸದಸ್ಯರು, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಯಂತ್ರೋಪಕರಣಗಳ ಮೂಲಕವೇ ಕಾಮಗಾರಿ ನಡೆಸುತ್ತಿದ್ದಾರೆ.
ರಾಜ್ಯದ 6018 ಗ್ರಾಪಂಗಳಲ್ಲಿ ಕೈಗೊಂಡಿರುವ ನರೇಗಾ ಕಾಮಗಾರಿಗಳ ವಿವರ ಕಾರ್ಮಿಕರನ್ನು ಬಳಸಿಕೊಂಡು ಕೆಲಸವನ್ನು ಶೀಘ್ರವಾಗಿ ಹಾಗೂ ಲಾಭದಾಯಕವಾಗಿ ನಡೆಸುವುದು ಕಷ್ಟ ಎಂಬ ಲೆಕ್ಕಾಚಾರದಲ್ಲಿ ಗುತ್ತಿಗೆದಾರರು ಯಂತ್ರಗಳನ್ನು ಬಳಸಿ ಕೆಲಸ ಮಾಡುತ್ತಿದ್ದಾರೆ. ಇನ್ನು ಗ್ರಾಮೀಣ ಭಾಗಗಳಲ್ಲಿಯೂ ಕೃಷಿ ಕೆಲಸಗಳಿಗೆ ಹೋಗುವ ಪುರುಷರಿಗೆ 500-1,000 ರೂಪಾಯಿವರೆಗೆ ಅರ್ಹತೆ ಮತ್ತು ಕೌಶಲ ಆಧರಿಸಿ ಕೂಲಿ ಕೊಡಲಾಗುತ್ತಿದೆ. ಮಹಿಳೆಯರಿಗೂ ದಿನಕ್ಕೆ 300-400 ರೂಪಾಯಿವರೆಗೆ ಕೂಲಿ ಇದೆ. ಇಂತಹ ಆಕರ್ಷಕ ಕೂಲಿ ಬಿಟ್ಟು 271 ರೂಪಾಯಿಯ ನರೇಗಾ ಕೆಲಸಕ್ಕೆ ಹೋಗಲು ಕಾರ್ಮಿಕರು ತಯಾರಿಲ್ಲ.
ಕಾರ್ಮಿಕರು ನರೇಗಾ ಕೆಲಸಗಳಿಗೆ ಬರದೇ ಇರುವ ಕಾರಣದಿಂದಾಗಿ ಗುತ್ತಿಗೆದಾರರು ಗ್ರಾಮೀಣ ಭಾಗದ ಜನರಿಗೆ ತಾವೇ ಖುದ್ದಾಗಿ ಓಡಾಡಿ ನರೇಗಾ ಕೂಲಿ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳನ್ನು ಮಾಡಿಸಿಕೊಟ್ಟಿದ್ದಾರೆ. ಅದರಂತೆ ನಿರ್ದಿಷ್ಟ ಕಾಮಗಾರಿಯಲ್ಲಿ ಇಂತಿಷ್ಟು ಕಾರ್ಮಿಕರು ದುಡಿದಿದ್ದಾರೆ ಎಂದು ಲೆಕ್ಕ ತೋರಿಸಿ, ನಕಲಿ ಕಾರ್ಮಿಕರ ಅಕೌಂಟ್ ಗಳಿಗೆ ಹಣ ಜಮೆಯಾಗುತ್ತಲೇ ನೂರಿನ್ನೂರು ಕಮಿಷನ್ ಕೊಟ್ಟು ಖಾತೆದಾರರಿಂದ ಹಣವನ್ನು ಡ್ರಾ ಮಾಡಿಸಿಕೊಳ್ಳುತ್ತಿದ್ದಾರೆ.
ಪ್ರಸ್ತುತ ಕೊರೊನಾ ಕಾರಣಕ್ಕಾಗಿ ಒಂದಷ್ಟು ಜನ ಹಳ್ಳಿಗಳಿಗೆ ವಾಪಸ್ಸಾಗಿದ್ದರೂ ಕಡಿಮೆ ಕೂಲಿ ಎಂಬ ಕಾರಣಕ್ಕೆ ನರೇಗಾ ಕೆಲಸಗಳತ್ತ ಮುಖ ಮಾಡುತ್ತಿಲ್ಲ. ಬದಲಿಗೆ ಸಮೀಪದ ಪಟ್ಟಣಗಳಿಗೆ, ದೊಡ್ಡಮಟ್ಟದಲ್ಲಿ ಕೃಷಿ ಮಾಡುತ್ತಿರುವ ರೈತರ ಬಳಿಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ಹೀಗಾಗಿ ಅಗತ್ಯವೆನ್ನಿಸುವ ಸಂದರ್ಭಗಳಲ್ಲಿ ನರೇಗಾ ಯೋಜನೆಯಡಿ ದುಡಿಯುವ ಕೆಲಸಗಾರರಿಗೆ ಗುತ್ತಿಗೆದಾರರು ಬೇರೆಡೆ ನೀಡುವಷ್ಟೇ ಕೂಲಿ ನೀಡಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಒಟ್ಟಾರೆ ನರೇಗಾದ ನಿರೀಕ್ಷೆಗಳು ಹಾಳೆಯ ಮೇಲಿನ ಲೆಕ್ಕದಲ್ಲಷ್ಟೇ ಜಾರಿಯಾಗುತ್ತಿವೆ.