ಬೆಂಗಳೂರು: ಕಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಕೊರತೆ ಉಂಟಾದ ಹಿನ್ನೆಲೆ ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಭೇಟಿ ನೀಡಿದ್ದರು. ಈ ವೇಳೆ ಘಟನೆ ಬಗ್ಗೆ ವಿವರಣೆ ಪಡೆದ ಸಚಿವರು ಆಕ್ಸಿಜನ್ ಪ್ಲಾಂಟ್ ಸಾಮರ್ಥ್ಯ ಎಷ್ಟು?. ಯಾಕೆ ಕೊರತೆ ಆಯ್ತು ಎಂಬುದರ ಕುರಿತು ವಿವರಣೆ ಪಡೆದುಕೊಂಡರು. ಕಿಮ್ಸ್ ಆಸ್ಪತ್ರೆಯ ಡೀನ್ ವಿ. ಟಿ. ವೆಂಕಟೇಶ್ ಸಚಿವರಿಗೆ ಈ ಕುರಿತು ಮಾಹಿತಿ ನೀಡಿದರು.
ಬೆಂಗಳೂರು ಕಿಮ್ಸ್ನಲ್ಲಿ ಆಕ್ಸಿಜನ್ ಸಿಲಿಂಡರ್ ಕೊರತೆ ಬಳಿಕ ಮಾತಾನಾಡಿದ ಸಚಿವರು, ಕಿಮ್ಸ್ಗೆ ವಾಡಿಕೆಯಂತೆ ಬರುತ್ತಿದ್ದ ಆಕ್ಸಿಜನ್ ಬೇಡಿಕೆ ಹೆಚ್ಚಾದ ಹಿನ್ನೆಲೆ ಪೂರೈಕೆದಾರರು ನಿಗದಿತ ಸಮಯಕ್ಕೆ ಸರಬರಾಜು ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಕಿಮ್ಸ್ ಆಡಳಿತ ಮಂಡಳಿ ಸರ್ಕಾರದ ಗಮನಕ್ಕೆ ವಿಷಯ ತಂದ ಕೂಡಲೇ, 178+23 ಮಂದಿ ಚಿಕಿತ್ಸೆ ಪಡೆಯುತ್ತಿದ್ದರು. ಅದರಲ್ಲಿ 23 ಮಂದಿಯನ್ನ ತಕ್ಷಣ ವಿಕ್ಟೋರಿಯಾ ಹಾಗೂ ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಮೂಲಕ ಆಗಬಹುದಾದ ಅನಾಹುತ ತಪ್ಪಿದೆ ಎಂದರು.
ಆಕ್ಸಿಜನ್ ಸಿಲಿಂಡರ್ ಪೂರೈಸುತ್ತಿದ್ದ ವೆಂಡರ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಶಾಶ್ವತ ಒಡಂಬಡಿಕೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ದಿಢೀರ್ ಆಕ್ಸಿಜನ್ ಸಿಲಿಂಡರ್ ಬೇಡಿಕೆ ಹೆಚ್ಚಿದ್ದು, ಪೂರೈಕೆದಾರರು ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಹೊಸದಾಗಿ ಲಿಕ್ವಿಡ್ ಯೂನಿಟ್ ಅಳವಡಿಸಿಕೊಳ್ಳಬೇಕು. ಎಲ್ಲ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಸಾಮರ್ಥ್ಯ ನೋಡಿಕೊಂಡು ಯುನಿಟ್ ಅಳವಡಿಸಲಾಗುತ್ತೆ ಎಂದು ತಿಳಿಸಿದರು.
ಸೋಮವಾರ ನಡೆದ ಘಟನೆಗೆ ಯಾರು ಹೊಣೆ?ನಿನ್ನೆ ನಡೆದ ಘಟನೆ ಯಾರ ತಪ್ಪಿನಿಂದ ಆಗಿದ್ದು ಎಂದು ಹೇಳಲು ಆಗದು. ಯಾಕೆಂದರೆ ದಿಢೀರ್ ಬೇಡಿಕೆ ಹೆಚ್ಚಾದ ಹಿನ್ನೆಲೆ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಲ್ಲಿ ಯಾರನ್ನೂ ದೂಷಿಸಲು ಸಾಧ್ಯವಾಗುವುದಿಲ್ಲ. ಯಾರು ಊಹಿಸಿಯು ಇರಲಿಲ್ಲ. ಮುಂದಿನ ದಿನಗಳಲ್ಲಿ ಆಕ್ಸಿಜನ್ ಪ್ರಮಾಣ ಇಷ್ಟರ ಮಟ್ಟಿಗೆ ಅವಶ್ಯಕತೆ ಬರಲಿದೆ ಅಂತ ತಿಳಿಸಿದರು.
ರಾಜ್ಯಕ್ಕೆ ಎದುರಾಗಲಿದೆಯಾ ಆಕ್ಸಿಜನ್ ಸಿಲಿಂಡರ್ ಕೊರತೆ?
ರಾಜ್ಯವನ್ನೂ ಒಳಗೊಂಡಂತೆ ಇತರೆಡೆ ಉತ್ಪಾದನೆ ಜೊತೆ ಜೊತೆಗೆ ಪೂರೈಕೆಯ ಸಮಸ್ಯೆಯೂ ಎದುರಾಗಿದೆ. ಕೊರೊನಾ ಕಾಲಿಟ್ಟಾಗಿನಿಂದ ಒಂದಲ್ಲ, ಒಂದು ಸಮಸ್ಯೆಗಳು ಎದುರಾಗುತ್ತಿವೆ. ಇದನ್ನ ಗೆಲ್ಲುವುದೇ ಸರ್ಕಾರಕ್ಕೆ ಮತ್ತು ಇಲಾಖೆಗೆ ದೊಡ್ಡ ಸವಾಲಾಗಿದೆ. ಕೋವಿಡ್ನ ಈ ಸಂಕಷ್ಟದಲ್ಲಿ ಮೊದಲು ಹಾಸಿಗೆಗಳ ಕೊರತೆ ಉಂಟಾಯಿತು. ಅಷ್ಟೇ ಯಾಕೆ ವೈದ್ಯಕೀಯ ಸಿಬ್ಬಂದಿಯ ಕೊರತೆಯನ್ನೂ ಎದುರಿಸಬೇಕಾಯಿತು.
ಇದೀಗ ರಾಜ್ಯದಲ್ಲಿರುವ ಸರ್ಕಾರಿ - ಖಾಸಗಿ ಆಸ್ಪತ್ರೆಗಳು ಆಕ್ಸಿಜನ್ ಸಿಲಿಂಡರ್ ಕೊರತೆ ಎದುರಿಸಬೇಕಾಗಿದೆ. ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ದೊಡ್ಡ ಸಮಸ್ಯೆಯೇ ಸೃಷ್ಟಿಯಾಗುವ ಸನ್ನಿವೇಶಗಳು ಕಾಣಿಸುತ್ತಿವೆ. ಇದಕ್ಕೆ ತಾಜಾ ಉದಾಹರಣೆ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಆಕ್ಸಿಜನ್ ಸಿಲಿಂಡರ್ ಕೊರತೆ ಉಂಟಾಗಿತ್ತು. ಕೊನೆಗೆ ಸರ್ಕಾರಿ ಆಸ್ಪತ್ರೆಗಳ ಮುಖೇನ ಆಗಬಹುದಾದ ಆಪತ್ತನ್ನು ತಪ್ಪಿಸಲಾಯಿತು.
ಕೊರೊನಾ ಬಂದ್ಮೇಲೆ ಆಕ್ಸಿಜನ್ ಬಳಕೆಮೂರು ಪಟ್ಟುಹೆಚ್ಚಾಯ್ತು:
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಜನರ ನಿರ್ಲಕ್ಷ್ಯವೂ ಅಥವಾ ಕೊರೊನಾ ಬಗೆಗಿನ ಅಸಡ್ಡೆಯೋ ಕೊನೆ ಹಂತದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಯ ಬಾಗಿಲು ತಟ್ಟುತ್ತಿದ್ದಾರೆ. ಸೋಂಕಿತ ರೋಗಿಗಳಿಗೆ ಕೃತಕ ಆಕ್ಸಿಜನ್ ಹೆಚ್ಚಾಗಿ ಬಳಕೆ ಆಗ್ತಿದೆ. ಸಾಮಾನ್ಯ ಸಂದರ್ಭಕ್ಕಿಂತ ಕೊರೊನಾದ ಸಮಯದಲ್ಲೇ ಆಕ್ಸಿಜನ್ ಬಳಕೆ ಗಣನೀಯ ಏರಿಕೆ ಆಗುತ್ತಿದೆ.
ಹೀಗಾಗಿ, ಈ ಹಿಂದೆ ಹಾಸಿಗೆ ವ್ಯವಸ್ಥೆ- ಆ್ಯಂಬುಲೆನ್ಸ್ ವ್ಯವಸ್ಥೆಯಲ್ಲಿಯಾದ ಕೊರತೆ ಆಕ್ಸಿಜನ್ ವಿಚಾರದಲ್ಲೂ ನಿರ್ಲಕ್ಷ್ಯ ವಹಿಸಿದರೆ ರೋಗಿಗಳ ಜೀವಕ್ಕೆ ಆಪತ್ತು ಕಟ್ಟಿಟ್ಟಬುತ್ತಿ. ಸದ್ಯಕ್ಕೆ ಸರ್ಕಾರಿ ಆಸ್ಪತ್ರೆಗಳಿಗೆ ಯಾವುದೇ ಸಮಸ್ಯೆ ಆಗದ ರೀತಿ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಆದರೆ ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಸಮಸ್ಯೆ ಎದುರಾಗುವ ಆತಂಕ ಇದೆ.
ಆಕ್ಸಿಜನ್ ಸಿಲಿಂಡರ್ ದರ ಹಚ್ಚಳ:
ಈಗಾಗಲೇ ಪೂರೈಕೆದಾರರು ಆಕ್ಸಿಜನ್ ದರ ಏರಿಕೆ ಮಾಡಿದ್ದು, ಒಂದು ಕ್ಯೂಬಿಕ್ ಮೀಟರ್ ಆಕ್ಸಿಜನ್ ಮೊದಲು 19 ರೂಪಾಯಿ ಇತ್ತು. ಆದರೆ ಕೊರೊನಾ ಸೋಂಕು ಹೆಚ್ಚಾದ ಬಳಿಕ 26 ರೂಪಾಯಿ ಆಗಿದೆ. ಈಗ ರಾಜ್ಯದಲ್ಲಿರುವ ಆಕ್ಸಿಜನ್ ಪ್ಲಾಂಟ್ಗಳ ಉತ್ಪಾದನೆ ಸಾಕಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರ್ತಿವೆ. ಹೀಗಾಗಿ ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ತರಿಸಬೇಕಾಗಿದೆ ಅಂತ ಪೂರೈಕೆದಾರರು ಹೇಳ್ತಿದ್ದಾರೆ. ಇದರಿಂದಾಗಿ ಒಂದು ಕ್ಯೂಬಿಕ್ ಮೀಟರ್ ಆಕ್ಸಿಜನ್ ಗೆ 31 ರೂ. ಆಗಲಿದೆ.
ರಾಜ್ಯದಲ್ಲಿ, ಬೆಂಗಳೂರಿನ ವೈಟ್ ಫೀಲ್ಡ್, ಬಳ್ಳಾರಿ ಕುಣಿಗಲ್ ಸೇರಿದಂತೆ ಕೇವಲ ಮೂರು ಕಡೆ ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತಿದೆ. ಆದರೆ ರಾಜ್ಯದಲ್ಲಿ ಆಕ್ಸಿಜನ್ ಬಳಕೆ ದಿಢೀರ್ ಹೆಚ್ಚಳವಾಗಿರೋದ್ರಿಂದ ಮುಂದೆ ಸಮಸ್ಯೆ ಆಗಲಿದೆ ಅಂತಿದ್ದಾರೆ ಖಾಸಗಿ ವಲಯದವರು. ಈಗಲೇ ಸರ್ಕಾರ ಆಕ್ಸಿಜನ್ ಪೂರೈಕೆ ವ್ಯತ್ಯಯ ಆಗದಂತೆ ಎಚ್ಚರ ವಹಿಸಬೇಕಿದೆ.
ವೈದ್ಯಕೀಯ ಶಿಕ್ಷಣ ಸಚಿವರ ಮಾತೇನು.?
ಕಿಮ್ಸ್ ಆಸ್ಪತ್ರೆ ಪ್ರಕರಣ ಒಂದು ಎಚ್ಚರಿಕೆಯಾಗಿದೆ. ಇನ್ಮುಂದೆ ಬೇರೆ ಎಲ್ಲೂ ಹೀಗಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ವಾಡಿಕೆಗಿಂತ ಕೃತಕ ಆಕ್ಸಿಜನ್ ಬಳಕೆ ಐದು ಪಟ್ಟು ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಗುಜರಾತ್ನಲ್ಲಿ ಹೆಚ್ಚು ಆಕ್ಸಿಜನ್ ಪ್ಲಾಂಟ್ಸ್ ಇವೆ, ಅಲ್ಲಿಂದ ತರಲು ನಿರ್ಧರಿಸಲಾಗಿದೆ. ಹೊಸ ಆಕ್ಸಿಜನ್ ಯೂನಿಟ್ಗಳನ್ನು ಅಳವಡಿಸಲು ಚಿಂತಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 2,400 ಎಂಎಂ ಸಾಮರ್ಥ್ಯದ ಆಕ್ಸಿಜನ್ ಇದೆ. ಸರ್ಕಾರದ ವತಿಯಿಂದ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ಹೆಚ್ಚಿಸಲು ಗಮನ ಸೆಳೆಯಲಾಗಿದೆ. ಈ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಇತರೆ ಜಿಲ್ಲೆಗಳಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ. ಅಲ್ಲಿ ಬೇಡಿಕೆಯೂ ಇರಲ್ಲ. ಈವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಮಸ್ಯೆ ಉಂಟಾಗಿಲ್ಲ, ಖಾಸಗಿಯಲ್ಲಿ ಸಮಸ್ಯೆ ಇದ್ದು, ಇನ್ಮುಂದೆ ಆಕ್ಸಿಜನ್ಗೆ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸುತ್ತೇವೆ. ಆಕ್ಸಿಜನ್ ದರ ಹೆಚ್ಚಳ ವಿಚಾರವಾಗಿಯೂ ಮಾತನಾಡಿದ ಸಚಿವರು, ಬೇಡಿಕೆ ಹೆಚ್ಚಾಗುತ್ತಿದ್ದಂತೆ ದರವೂ ಹೆಚ್ಚಾಗೋದು ಸಹಜ ಅಂತ ತಿಳಿಸಿದರು.