ಕೆ.ಆರ್ ಪುರಂ (ಬೆಂಗಳೂರು):ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬೆಂಗಳೂರು ಪೂರ್ವ ತಾಲೂಕಿನ 11 ಪಂಚಾಯತಿ ಚುನಾವಣೆಯಲ್ಲಿ 8 ಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಗಳಿಸಿದ್ದಾರೆ. ಒಂದು ಪಂಚಾಯತಿ ಕಾಂಗ್ರೆಸ್ ಹಾಗು ಎರಡು ಪಂಚಾಯತಿಗಳು ಅತಂತ್ರ ಸ್ಥಿತಿಯಲ್ಲಿವೆ.
ಕಣ್ಣೂರು, ದೊಡ್ಡಗುಬ್ಬಿ, ಹಾಲನಾಯಕನಹಳ್ಳಿ, ಕೊಡತಿ, ಆವಲಹಳ್ಳಿ, ದೊಡ್ಡಬನಹಳ್ಳಿ, ಮಂಡೂರು, ಕಿತ್ತಗನೂರು ಪಂಚಾಯತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದು, ಈ ಪಂಚಾಯತಿಗಳು ಬಿಜೆಪಿ ತೆಕ್ಕೆಗೆ ಬೀಳಲಿವೆ.
ಬಿದರಹಳ್ಳಿಯು ಕಾಂಗ್ರೆಸ್ ಪಾಲಿಗೆ ಒಲಿದ ಏಕೈಕ ಪಂಚಾಯತಿ ಆಗಿದೆ. ಉಳಿದಂತೆ ಕನ್ನಮಂಗಲ ಹಾಗೂ ಶಿಗೇಹಳ್ಳಿ ಪಂಚಾಯತಿಗಳು ಅತಂತ್ರ ಸ್ಥಿತಿಯಲ್ಲಿದ್ದು ಸ್ವತಂತ್ರ ಅಭ್ಯರ್ಥಿಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ.
ಈ ಚುನಾವಣೆಯಲ್ಲಿ ಹಲವು ಕುತೂಹಲಕರ ಅಂಶಗಳು ಗಮನ ಸೆಳೆದಿದ್ದು, ಅವಲಹಳ್ಳಿ ಪಂಚಾಯತಿಯಲ್ಲಿ ಹೆಚ್.ಎ.ಎಲ್ ಉದ್ಯೋಗಿ ದೇವರಾಜ್ ಹಾಗು ಪತ್ನಿ ಜ್ಯೋತಿ ದೇವರಾಜ್ ದಂಪತಿ ಜಯಗಳಿಸಿರುವುದು ವಿಶೇಷವಾಗಿದೆ. ಪಂಚಾಯತಿಗಾಗಿ ಹೆಚ್.ಎ.ಎಲ್ನ ಉದ್ಯೋಗವನ್ನು ತ್ಯಜಿಸುವ ಮೂಲಕ ಜನರ ಸೇವೆಗೆ ಮುಂದಾಗಿದ್ದಾರೆ.
ಕೊಡತಿ ಪಂಚಾಯತಿ ನಂಜುಂಡರೆಡ್ಡಿ 6 ಮತಗಳ ಅಂತರದಲ್ಲಿ ಜಯಶೀಲರಾದರೆ, ಕಣ್ಣೂರು ಪಂಚಾಯತಿ ವ್ಯಾಪ್ತಿಯ ಬಂಡೇ ಬೊಮ್ಮಸಂದ್ರ ಮತ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಾರಾಯಣ ರೆಡ್ಡಿ ಹಾಗೂ ಕನ್ನಮಂಗಲ ಪಂಚಾಯತಿಯ ಬೆಳತೂರು ಯಲ್ಲಪ್ಪ ಇಬ್ಬರು ತಲಾ 8 ಮತಗಳ ಕಡಿಮೆ ಅಂತರದಿಂದ ಜಯಗಳಿಸಿದ್ದಾರೆ. ಕಿತ್ತಗನೂರು ಪಂಚಾಯತಿ ಬಿಜೆಪಿ ಅಭ್ಯರ್ಥಿ ಕೌಶಿಕ್ 501, ಮತ್ತು ಇದೇ ಪಂಚಾಯತಿಯ ಅಶಾರಾಣಿ 436 ಮತಗಳ ಭಾರಿ ಅಂತರದಿಂದ ಜಯಗಳಿಸಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ತಮ್ಮ ನಾಯಕರ ಗೆಲುವಿಗೆ ಸಂಭ್ರಮಾಚರಣೆ ನಡೆಸುವ ಮೂಲಕ ಸಂತಸ ಪಟ್ಟಿದ್ದಾರೆ. 11 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 262 ಸ್ಥಾನಗಳಲ್ಲಿ 15 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.