ಬೆಂಗಳೂರು: ಕೆಐಡಿಬಿಯಿಂದ ಸ್ವಾಧೀನಪಡಿಸಿಕೊಂಡ ಜಮೀನಿಗೆ ರೈತರು ನಗದು ಪರಿಹಾರ ಪಡೆಯದೇ ಇದ್ದಲ್ಲಿ, ಅಭಿವೃದ್ದಿಪಡಿಸಿದ ನಿವೇಶನದಲ್ಲಿ ಪ್ರತಿ ಎಕರೆಗೆ 10,781 ಚ.ಅಡಿ ಜಾಗವನ್ನು ಫಲಾನುಭವಿಗಳಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ವಿಧಾನಪರಿಷತ್‍ನಲ್ಲಿ ಕಾಂಗ್ರೆಸ್ ಸದಸ್ಯ ಸಲೀಂ ಅಹಮ್ಮದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಮೊದಲು ಪ್ರತಿ ಎಕರೆಗೆ 9,500 ಚದರ ಅಡಿ ಅಭಿವೃದ್ದಿಪಡಿಸಿದ ಜಾಗವನ್ನು ಭೂ ಮಾಲೀಕರಿಗೆ ನೀಡಲಾಗುತ್ತಿತ್ತು. ಈಗ ಎಕರೆಗೆ 10,781 ಚದರ ಅಡಿ ಜಾಗವನ್ನು ನೀಡಲು ನಿರ್ಧರಿಸಲಾಗಿದೆ ಎಂದರು.
ಜಮೀನು ಕಳೆದುಕೊಂಡ ಕುಟುಂಬದ ಸದಸ್ಯರಲ್ಲಿ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಸ್ಥಾಪಿಸಿದ ಕೈಗಾರಿಕೆಗಳಲ್ಲಿ ಉದ್ಯೋಗ ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ಭೂಮಿಯ ಬದಲಾಗಿ ಪರ್ಯಾಯ ಭೂಮಿ ನೀಡುವ ವ್ಯವಸ್ಥೆ ದೇಶದಲ್ಲಿ ಎಲ್ಲಿಯೂ ಜಾರಿಯಲ್ಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ನಿರಾಣಿ ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ 83,058 ಎಕರೆಯನ್ನು ಕೈಗಾರಿಕಾ ಪ್ರದೇಶಕ್ಕಾಗಿ 79,017 ಎಕರೆಯನ್ನು ಏಕಘಟಕ ಸಂಕೀರ್ಣದಡಿ ಒಟ್ಟು 1,62,000 ಎಕರೆಯನ್ನು ಕೆಐಎಡಿಬಿ ವಿವಿಧ ಜಿಲ್ಲೆಗಳಲ್ಲಿ ಸ್ವಾಧೀನಪಡಿಸಿಕೊಂಡಿದೆ ಎಂದು ಸಚಿವ ಮುರುಗೇಶ್ ನಿರಾಣಿ ವಿವರಿಸಿದರು.
ಇದನ್ನೂ ಓದಿ:ಮೇಕೆದಾಟು ಯೋಜನೆಗೆ ದೊಣ್ಣೆ ನಾಯಕರ ಅಪ್ಪಣೆ ಬೇಕೇ.. ತಮಿಳುನಾಡು ನಿರ್ಣಯದ ವಿರುದ್ಧ ಇಡೀ ವಿಧಾನಸಭೆ ಸದಸ್ಯರಿಂದ ಖಂಡನೆ..