ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ಚುನಾವಣೆ ನಿಯಮ ಬದ್ಧವಾಗಿ ನಡೆದಿಲ್ಲ ಎಂದು ಆರೋಪಿಸಿ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಹೈಕೋರ್ಟ್ ತೀರ್ಪಿನಿಂದಾಗಿ ಚುನಾವಣೆಯ ಫಲಿತಾಂಶ ಪ್ರಕಟಿಸುವುದಕ್ಕೆ ಹಸಿರು ನಿಶಾನೆ ದೊರೆತಿದೆ. ಸಂಘದ ಚುನಾವಣೆ ಆಕ್ಷೇಪಿಸಿ ಹೆಚ್.ಎಲ್ ಅಮರನಾಥ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಜೊತೆಗೆ ಚುನಾವಣಾ ಫಲಿತಾಂಶಕ್ಕೆ ನೀಡಿದ್ದ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಿದೆ. ಕರ್ನಾಟಕ ಟ್ರೇಡ್ ಯೂನಿಯನ್ ಎಲೆಕ್ಷನ್ (ಮಾಡೆಲ್ ರೂಲ್ಸ್) 1953ರ ಪ್ರಕಾರ ಸಂಘದಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಸದಸ್ಯರಿದ್ದ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯೇ ಚುನಾವಣೆ ನಡೆಸಬೇಕು. ಆದರೆ, ಸಂಘವೇ ಚುನಾವಣಾಧಿಕಾರಿಯನ್ನು ನೇಮಿಸಿಕೊಂಡು ಚುನಾವಣೆ ನಡೆಸಿರುವುದು ಸರಿಯಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
ಈ ವಾದ ಪರಿಗಣಿಸಲು ನಿರಾಕರಿಸಿರುವ ಪೀಠ, ಹಿರಿಯ ಸಂಪಾದಕರನ್ನು ಚುನಾವಣಾಧಿಕಾರಿಯನ್ನಾಗಿ ನಿಯೋಜಿಸಿಕೊಳ್ಳಲು ಸಂಘದ ಬೈ ಲಾ ದಲ್ಲಿ ಅವಕಾಶವಿದೆ. ಅದರಂತೆ, ಕಾರ್ಮಿಕರ ಇಲಾಖೆ ಆಯುಕ್ತರ ಅನುಮತಿ ಮೇರೆಗೆ ಹಿರಿಯ ಸಂಪಾದಕರೊಬ್ಬರನ್ನು ಚುನಾವಣಾಧಿಕಾರಿಯಾಗಿ ನೇಮಿಸಿದ್ದಾರೆ. ಚುನಾವಣಾಧಿಕಾರಿಯು ಆಯುಕ್ತರಿಂದ ನಾಮ ನಿರ್ದೇಶಿತರಾಗಿರುತ್ತಾರೆ. ಮೇಲಾಗಿ ಕಾರ್ಮಿಕ ಇಲಾಖೆಯೇ ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಚುನಾವಣೆಯ ಮೇಲ್ವಿಚಾರಣೆ ನಡೆಸಿದೆ. ಹೀಗಾಗಿ, ಚುನಾವಣೆ ಕ್ರಮಬದ್ಧವಾಗಿ ನಡೆದಿದೆ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.