ಬೆಂಗಳೂರು:ಭದ್ರಾ ಮೇಲ್ದಂಡೆ ಯೋಜನೆಗೆ ಚಿಕ್ಕಮಗಳೂರಿನ ಸಂರಕ್ಷಿತ ಅಮೃತ್ ಮಹಲ್ ಕಾವಲ್‌ನ 61 ಎಕರೆ ಭೂಮಿ ಬಳಸುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿ ಮಧ್ಯಂತರ ಅರ್ಜಿ ಸಲ್ಲಿಸಿರುವ ಕಡೂರು ಕ್ಷೇತ್ರದ ಶಾಸಕ ಬೆಳ್ಳಿ ಪ್ರಕಾಶ್ ನಡೆಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಯೋಜನೆಗೆ ಅಮೃತ ಮಹಲ್ ಕಾವಲ್ ಜಮೀನು ಬಳಸಲು ಅನುಮತಿ ನೀಡಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ವನ್ಯಜೀವಿ ಸಂರಕ್ಷಕ ಹಾಗೂ ಪರಿಸರವಾದಿ ಡಿ.ವಿ. ಗಿರೀಶ್ ಮತ್ತಿತರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಕಡೂರು ಕ್ಷೇತ್ರದ ಶಾಸಕ ಬೆಳ್ಳಿ ಪ್ರಕಾಶ್ ಪರ ವಕೀಲರು, ಪಿಐಎಲ್ ಅರ್ಜಿಗೆ ಆಕ್ಷೇಪಿಸಿ ಮಧ್ಯಂತರ ಅರ್ಜಿ ಸಲ್ಲಿಸಿದರು. ಜತೆಗೆ, ಗಿರೀಶ್ ಅವರ ಅರ್ಜಿಯು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯು ನಾಲ್ಕು ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಯಾಗಿದೆ. ಬಹಳ ಕಡಿಮೆ ಪ್ರಮಾಣದ ಜಮೀನು ಬಳಕೆ ಮಾಡಲಾಗುತ್ತದೆ ಎಂದು ವಿವರಿಸಿದರು.
ಇದನ್ನೂ ಓದಿ:ಆ್ಯಂಬುಲೆನ್ಸ್ ಸುಗಮ ಸಂಚಾರ ವಿಚಾರ.. ಟೆಂಡರ್ ದಾಖಲೆಗಳನ್ನು ಕೇಳಿದ ಹೈಕೋರ್ಟ್
ಇದಕ್ಕೆ ಆಕ್ಷೇಪಿಸಿದ ಪೀಠ, ಯೋಜನೆ ಯಾವುದೇ ಇದ್ದರೂ, ಪರಿಸರ ಇಲಾಖೆಯಿಂದ ನಿರಾಕ್ಷೇಪಣೆ ಪಡೆಯದೆ ಕಾಮಗಾರಿ ಆರಂಭಿಸಬಹುದೇ? ಅದಕ್ಕೆ ನಿಮ್ಮ ಶಾಸಕರ ಬೆಂಬಲ ಇದೆಯೇ? ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ನೀವು ಹೇಗೆ ಹೇಳುತ್ತೀರಿ? ಅಮೃತ ಮಹಲ್ ಕಾವಲು ಭೂಮಿಯಲ್ಲಿ ಪೂರ್ವಾನುಮತಿ ಇಲ್ಲದೆ, ಕಾಮಗಾರಿ ನಡೆಸಬಹುದೇ? ಅಭಿವೃದ್ಧಿ ಹೆಸರಲ್ಲಿ ಅರಣ್ಯ ಹಾಗೂ ವನ್ಯಜೀವಿ ನಾಶ ಸರಿಯೇ? ಪರಿಸರ ಸಂರಕ್ಷಣೆಗೆ ನಿಮ್ಮ ಶಾಸಕ ಬೆಳ್ಳಿ ಪ್ರಕಾಶ್ ಕೊಡುಗೆ ಏನು? ಎಂದು ಖಾರವಾಗಿ ಪ್ರಶ್ನಿಸಿತು.
ಅಲ್ಲದೆ, ಶಾಸಕರಾದವರ ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ. ಹೀಗಾಗಿ, ಯೋಜನೆ ಹೊಣೆ ಹೊತ್ತಿರುವ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಕಾನೂನು ಪಾಲಿಸುವಂತೆ ನೀವು ಸಲಹೆ ಕೊಡಬೇಕು. ಅದು ಬಿಟ್ಟು ಹೀಗೆ ಬೇಜವಾಬ್ದಾರಿಯಿಂದ ವರ್ತಿಸಬಾರದು ಎಂದಿತು. ಹಾಗೆಯೇ, ಮುಂದಿನ ವಿಚಾರಣೆ ವೇಳೆ ಪಿಐಎಲ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂಬುದಕ್ಕೆ ಸೂಕ್ತ ವಿವರಣೆ ನೀಡಬೇಕು. ಇಲ್ಲದಿದ್ದರೆ, ನ್ಯಾಯಾಲಯ ದಂಡ ವಿಧಿಸಲಿದೆ ಎಂದು ಬೆಳ್ಳಿ ಪ್ರಕಾಶ್ ಅವರಿಗೆ ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿತು.
ಪಿಐಎಲ್ ಕೋರಿಕೆ:ಯೋಜನೆಗೆ ಬಳಕೆಯಾಗುತ್ತಿರುವ ಬಾಸೂರು ಅಮೃತ ಮಹಲ್ ಕಾವಲಿನ ಕೆಲ ಭೂಪ್ರದೇಶ ಕೃಷ್ಣಮೃಗಗಳ ವಾಸಸ್ಥಾನವಾಗಿವೆ. ಕಾಮಗಾರಿಗೆಂದು ನೀಡಲಾಗಿರುವ ಜಾಗದಲ್ಲಿ ಅಪರೂಪದ ಸಸ್ಯಪ್ರಬೇಧಗಳಿವೆ. ಯೋಜನೆ ಆರಂಭಿಸಿದರೆ ಅಲ್ಲಿರುವ ಪ್ರಾಣಿ ಹಾಗೂ ಸಸ್ಯ ಸಂಕುಲಕ್ಕೆ ಹಾನಿಯಾಗಲಿದೆ. ಭದ್ರಾ ಮೇಲ್ದಂಡೆ ಯೋಜನೆ ಸಂರಕ್ಷಿತ ಅಮೃತ್ ಮಹಲ್ ಕಾವಲ್ ಮೂಲಕ ಹಾದು ಹೋಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದರೂ ಭೂಮಿ ಬಳಕೆಗೆ ಅನುಮತಿ ನೀಡಲಾಗಿದೆ. ಆದ್ದರಿಂದ ಯೋಜನೆಗೆ ತಡೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.