ಬೆಂಗಳೂರು :ಲಾಕ್ಡೌನ್ ಹಿನ್ನೆಲೆ ಗ್ರಾಹಕರು ವಸ್ತುಗಳ ಖರೀದಿಸಲು ಸಾಲಿನಲ್ಲಿ ನಿಂತಾಗ ಅಥವಾ ಅವಶ್ಯಕ ವಸ್ತುಗಳನ್ನು ತರಲು ರಸ್ತೆಯಲ್ಲಿ ಸಂಚರಿಸುತ್ತಿರುವಾಗ ಮಾಸ್ಕ್ ಧರಿಸಲೇಬೇಕು ಎಂದು ಪೊಲೀಸರು ಒತ್ತಾಯಿಸುತ್ತಾರೆ. ಆದರೆ, ಆರೋಗ್ಯ ಇಲಾಖೆ ಇಂದು ಪ್ರಕಟಣೆಯಲ್ಲಿ ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಹೇಳಿದೆ.
ಮಾಸ್ಕ್ ಬಗ್ಗೆ ಜನರಲ್ಲಿ ಗೊಂದಲ.. ಪೊಲೀಸರು ಹಾಕಿ ಅಂದ್ರೇ, ಆರೋಗ್ಯ ಇಲಾಖೆ ಬೇಡ ಅಂತಿದೆ.. - kovid-19
ಕೊರೊನಾ ಭೀತಿಯಲ್ಲಿರೋ ಜನರಿಗೆ ಪೊಲೀಸರ ನಿಯಮಗಳು ಗೊಂದಲ ಉಂಟು ಮಾಡ್ತಿವೆ. ರಾಜ್ಯ ಆರೋಗ್ಯ ಇಲಾಖೆ ಎಲ್ಲರೂ ಮಾಸ್ಕ್ ಧರಿಸುವ ಅವಶ್ಯಕತೆಯಿಲ್ಲ ಎಂದು ಸ್ಪಷ್ಟನೆ ನೀಡಿದೆ. ಆದರೆ, ಪೊಲೀಸರು ಮಾತ್ರ ಸಿಕ್ಕ ಸಿಕ್ಕಲ್ಲಿ ಹಾಕಿದ ಬಟ್ಟೆಯನ್ನಾದರೂ ಬಿಚ್ಚಿ ಮಾಸ್ಕ್ ರೀತಿ ಹಾಕಿಕೊಳ್ಳುವಂತೆ ಜನರಿಗೆ ಒತ್ತಾಯಿಸುತ್ತಿದ್ದಾರೆ.
ದಿನಸಿ ಅಂಗಡಿ ಹಾಗೂ ಇನ್ನಿತರ ಅಂಗಡಿ ಮುಂಗಟ್ಟಿನಲ್ಲಿ ಎಲ್ಲರೂ ಮಾಸ್ಕ್ ಧರಿಸಬೇಕು ಎಂದು ಒತ್ತಾಯ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಈ ಹಿಂದೆಯೂ ವಿವಿಧ ರೀತಿಯಲ್ಲಿ ಎಲ್ಲರೂ ಮಾಸ್ಕ್ ಧಾರಣೆ ಬೇಡವೆಂದು ಸ್ಪಷ್ಟಪಡಿಸಲಾಗಿತ್ತು. ಯಾರಿಗೆ ಕೊರೊನಾ ಲಕ್ಷಣಗಳಾದ ಉಸಿರಾಟದ ತೊಂದರೆ, ಕೆಮ್ಮು, ನೆಗಡಿ ಅಥವಾ ಜ್ವರ ಇರುತ್ತದೆಯೋ ಅವರು ಮಾತ್ರ ಮಾಸ್ಕ್ ಧರಿಸಬೇಕು. ಹಾಗೂ ಯಾರು ಆರೋಗ್ಯ ಸೇವೆಗಳಲ್ಲಿ ಇದ್ದರೆ ಅವರು ಎನ್ -95 ಮಾಸ್ಕ್ ಧರಿಸಬೇಕು ಎಂದು ಇಲಾಖೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ಪೊಲೀಸರ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹಾಲು ಅಥವಾ ದಿನಸಿ ಅಂಗಡಿಗೆ ತೆರಳುವ ಜನಕ್ಕೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ ಎಂದು ನೆಟ್ಟಿಗರು ಕಿಡಿ ಕಾರಿದ್ದರು. ಜೊತೆಗೆ ಶರ್ಟ್ ಅಥವಾ ಕರವಸ್ತ್ರವನ್ನೇ ಮಾಸ್ಕ್ ರೀತಿ ಹಾಕಿ ಎಂದು ಪೊಲೀಸರು ಜನರಿಗೆ ಹೇಳಿದ್ದು ಎಷ್ಟು ವೈಜ್ಞಾನಿಕ ಎಂಬ ಪ್ರಶ್ನೆ ಉದ್ಭವಿಸಿತ್ತು.