ಬೆಂಗಳೂರು:ರಾಜ್ಯ ಅಬಕಾರಿ ಇಲಾಖೆ ನಿಗದಿತ ಗುರಿಯನ್ನೂ ಮೀರಿ ತೆರಿಗೆ ಸಂಗ್ರಹ ಮಾಡಿದೆ. 2021-22 ಸಾಲಿನಲ್ಲಿ ಅಬಕಾರಿ ಇಲಾಖೆ 26,276.83 ಕೋಟಿ ರೂ. ರಾಜಸ್ವ ಸಂಗ್ರಹಿಸಿ ನಿರೀಕ್ಷೆಗಿಂತಲೂ ಉತ್ತಮ ಪ್ರಗತಿ ಸಾಧಿಸಿದೆ. 2021-22 ಸಾಲಿನ ಆರ್ಥಿಕ ವರ್ಷ ಮುಕ್ತಾಯವಾಗಿದೆ. ರಾಜ್ಯ ಸರ್ಕಾರ ಈ ಬಾರಿಯೂ ತೆರಿಗೆ ಸಂಗ್ರಹದಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಆದರೆ ಈ ಬಾರಿಯೂ ರಾಜ್ಯದ ಬೊಕ್ಕಸದ ಕೈ ಹಿಡಿದಿರುವುದು ಅಬಕಾರಿ ಇಲಾಖೆ. ಅಬಕಾರಿ ಇಲಾಖೆ ನಿರೀಕ್ಷಿತ ಆದಾಯ ಗುರಿಗಿಂತಲೂ ಅಧಿಕ ತೆರಿಗೆ ಸಂಗ್ರಹ ಮಾಡಿ ಉತ್ತಮ ಸಾಧನೆ ತೋರಿಸಿದೆ. ಲಾಕ್ಡೌನ್ ಸೇರಿ ಇತರ ಕೋವಿಡ್ ನಿರ್ಬಂಧಗಳ ಮಧ್ಯೆ ಅಬಕಾರಿ ಇಲಾಖೆ ಭರ್ಜರಿ ತೆರಿಗೆ ಸಂಗ್ರಹಿಸಿದೆ.
ಒಟ್ಟು ತೆರಿಗೆ ಸಂಗ್ರಹ ಹೇಗಿದೆ?: ಅಬಕಾರಿ ಇಲಾಖೆ 2021-22 ಸಾಲಿನ ಅಂತ್ಯಕ್ಕೆ ಬರೋಬ್ಬರಿ 26,276.83 ಕೋಟಿ ರೂ. ರಾಜಸ್ವ ಸಂಗ್ರಹ ಮಾಡಿದೆ. ನಿಗದಿತ ಗುರಿ ಹೊಂದಿದ್ದು 24,580 ಕೋಟಿ ರೂ. ಅಂದರೆ ನಿಗದಿತ ಗುರಿಗಿಂತ 1,696 ಕೋಟಿ ರೂ. ಅಧಿಕ ರಾಜಸ್ವ ಸಂಗ್ರಹ ಮಾಡಿರುವುದಾಗಿ ಅಬಕಾರಿ ಇಲಾಖೆ ಮಾಹಿತಿ ನೀಡಿದೆ. ಆರ್ಥಿಕ ಕೊನೆ ತಿಂಗಳು ಮಾರ್ಚ್ ನಲ್ಲಿ 2,551.97 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹ ಮಾಡಲಾಗಿದೆ. ಫೆಬ್ರವರಿಯಲ್ಲಿ 2174.93 ಕೋಟಿ ರೂ. ರಾಜಸ್ವ ತೆರಿಗೆ ಸಂಗ್ರಹ ಮಾಡಲಾಗಿತ್ತು. ಜನವರಿಯಲ್ಲಿ 2,115.52 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿತ್ತು. 2020-21 ಸಾಲಿನಲ್ಲಿ ಅಬಕಾರಿ ಇಲಾಖೆ 23,332.10 ಕೋಟಿ ರೂ. ರಾಜಸ್ವ ಸಂಗ್ರಹ ಮಾಡಿತ್ತು. ಆ ಮೂಲಕ ಕಳೆದ ಸಾಲಿಗೆ ಹೋಲಿಸಿದರೆ 2021-22 ಸಾಲಿನಲ್ಲಿ 2,944.73 ಕೋಟಿ ರೂ. ಅಧಿಕ ರಾಜಸ್ವ ಸಂಗ್ರಹ ಕಂಡಿದೆ. ಅಂದರೆ ಸುಮಾರು 12.62% ಏರಿಕೆ ಕಂಡಿದೆ.