ಬೆಂಗಳೂರು: ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ವತಿಯಿಂದ "ಲಕ್ಷ ಕಂಠಗಳಲ್ಲಿ" ಕನ್ನಡ ಗೀತಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಕನ್ನಡಿಗರು ಕನ್ನಡ ಗೀತೆಗಳ ಲಕ್ಷ ಕಂಠ ಗೀತಗಾಯನದಲ್ಲಿ ಭಾಗಿಯಾಗಲಿದ್ದಾರೆ.
ಲಕ್ಷ ಕಂಠ ಗೀತಗಾಯನ ಕಾರ್ಯಕ್ರಮದ ಮೂಲಕ ಹೊಸದೊಂದು ದಾಖಲೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಪ್ರಮುಖವಾಗಿ ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ, ನಿಸಾರ್ ಅಹಮ್ಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಹಂಸಲೇಖ ಅವರ ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳು ಏಕಕಾಲದಲ್ಲಿ ಮೊಳಗಲಿವೆ.
ಇದನ್ನೂ ಓದಿರಿ:ಇಂದಿನಿಂದ ಪ್ರಸಿದ್ಧ ಹಾಸನಾಂಬೆ ದೇಗುಲ ಓಪನ್... ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ದರ್ಶನ ಭಾಗ್ಯ
ರಾಜ್ಯದ 31 ಜಿಲ್ಲೆಗಳಲ್ಲಿ ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಭೂತಪೂರ್ವ ಕನ್ನಡ ಉತ್ಸವ ನಡೆಸಲು ತಯಾರಿ ನಡೆಸಲಾಗಿದೆ. ರಾಜಧಾನಿಯ ವಿಧಾನಸೌಧದಿಂದ ಹಿಡಿದು ರಾಜ್ಯದ ಮೂಲೆ ಮೂಲೆಯ ಹಳ್ಳಿಗಳಲ್ಲಿ ಬೆಳಗ್ಗೆ 11 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ.
ಸಂಕಲ್ಪ :ಇದೇ ಸಂದರ್ಭದಲ್ಲಿ ಗೀತಗಾಯನದ ನಂತರ ಸಂಕಲ್ಪವೊಂದನ್ನು ಸ್ವೀಕರಿಸಬೇಕು. 'ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಎಂಬ ಪಣ ತೊಡುತ್ತೇನೆ.ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಬದ್ಧನಾಗಿರುತ್ತೇನೆ ಎಂಬ ಸಂಕಲ್ಪವನ್ನು ಸ್ವೀಕಾರ ಮಾಡಲಾಗುವುದು.