ಕರ್ನಾಟಕ

karnataka

ETV Bharat / city

"ನೆರವು" ಸಂಚಾರಿ ಪೊಲೀಸ್ ಕ್ಯಾಬಿನ್‍ ಉದ್ಘಾಟಿಸಿದ ಪಂತ್​, ಭಾಸ್ಕರ್ ರಾವ್

ಪೊಲೀಸರ ವಿಶ್ರಾಂತಿಗಾಗಿ ರಾಜಧಾನಿಯ ಟೌನ್ ಹಾಲ್, ಮೌರ್ಯ ವೃತ್ತ, ಸ್ವಾತಂತ್ರ್ಯ ಉದ್ಯಾನವನ, ಮಾರ್ಕೆಟ್, ಚಾಲುಕ್ಯ ವೃತ್ತ, ಮಲ್ಲೇಶ್ವರ, ಉಳ್ಳಾಲದ ಸಮೀಪ "ನೆರವು" ಸಂಚಾರಿ ಕ್ಯಾಬಿನ್‍ ಸ್ಥಾಪಿಸಲಾಗಿದ್ದು, ಕಮಲ್ ಪಂತ್​ ಹಾಗೂ ಭಾಸ್ಕರ್ ರಾವ್ ಇಂದು ಉದ್ಘಾಟಿಸಿದರು.

ಪೊಲೀಸ್ ಕ್ಯಾಬಿನ್‍ ಉದ್ಘಾಟನೆ
ಪೊಲೀಸ್ ಕ್ಯಾಬಿನ್‍ ಉದ್ಘಾಟನೆ

By

Published : Dec 18, 2020, 3:58 PM IST

ಬೆಂಗಳೂರು: ಪೊಲೀಸರ ವಿಶ್ರಾಂತಿಗಾಗಿ ರಾಜಧಾನಿಯ 7 ಸ್ಥಳಗಳಲ್ಲಿ ಸ್ಥಾಪಿಸಲಾದ "ನೆರವು" ಸಂಚಾರಿ ಕ್ಯಾಬಿನ್‍ಗಳನ್ನು ಪೊಲೀಸ್ ಆಯುಕ್ತ ಕಮಲ್ ಪಂತ್​ ಹಾಗೂ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಇಂದು ಲೋಕಾರ್ಪಣೆ ಮಾಡಿದರು.

ಪೊಲೀಸ್ ಕ್ಯಾಬಿನ್‍ ಉದ್ಘಾಟನೆ

ಪೊಲೀಸರ ವಿಶ್ರಾಂತಿಗಾಗಿ "ನೆರವು" ಸಂಚಾರಿ ಕ್ಯಾಬಿನ್‍ಗಳು ಸ್ಥಳಾವಕಾಶ ಪೂರೈಸುವ ಜೊತೆಗೆ ಪೊಲೀಸರೊಂದಿಗೆ ಪ್ರಾಥಮಿಕ ಸಂಪರ್ಕದ ಸ್ಥಳವಾಗಿ ನಾಗರಿಕರಿಗೆ ಸೇವೆ ಸಲ್ಲಿಸಲಿವೆ. ಕೆ.ಐ.ಎ.ಬಿ ಸಾಮಾಜಿಕ ಜವಾಬ್ದಾರಿ ಕಾರ್ಯ ಶ್ಲಾಘನೀಯ. ಈ ಪೊಲೀಸ್ ಕ್ಯಾಬಿನ್‍ಗಳು ನಗರದ ಏಳು ಭಾಗದಲ್ಲಿ ಪ್ರಾಥಮಿಕ ಹಂತದಲ್ಲಿ ನಿರ್ಮಾಣಗೊಂಡಿದ್ದು, ಟೌನ್ ಹಾಲ್, ಮೌರ್ಯ ವೃತ್ತ, ಸ್ವಾತಂತ್ರ್ಯ ಉದ್ಯಾನವನ, ಮಾರ್ಕೆಟ್, ಚಾಲುಕ್ಯ ವೃತ್ತ, ಮಲ್ಲೇಶ್ವರ, ಉಳ್ಳಾಲದ ಸಮೀಪ ಕಾರ್ಯರೂಪಕ್ಕೆ ಬರಲಿವೆ ಎಂದು ಕಮಲ್ ಪಂತ್​ ಹಾಗೂ ಭಾಸ್ಕರ್ ರಾವ್ ತಿಳಿಸಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು (ಕೆ.ಐ.ಎ.ಬಿ) ಕಾರ್ಯಾಚರಣೆ ನಿರ್ವಹಿಸುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿ.ಐ.ಎ.ಎಲ್.) ಸಂಸ್ಥೆಯು ಬೆಂಗಳೂರು ನಗರ ಪೊಲೀಸ್‍ ಇಲಾಖೆಗೆ ತನ್ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ಉಪಕ್ರಮದ ಅಡಿಯಲ್ಲಿ ಏಳು ಸಂಚಾರಿ ಕ್ಯಾಬಿನ್‍ಗಳನ್ನು ದಾನವಾಗಿ ನೀಡಿದೆ. ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್ ಬೆಂಬಲದೊಂದಿಗೆ ಈ ಅನನ್ಯ ಚಿಂತನೆಯ ಉಪಕ್ರಮವನ್ನು ರೂಪಿಸಲಾಗಿತ್ತು.

ಈ ಕ್ಯಾಬಿನ್‍ಗಳನ್ನು ನಗರದ ಪ್ರಮುಖ ಸ್ಥಳಗಳಲ್ಲಿ ಯೋಜನಾತ್ಮಕವಾಗಿ ಇರಿಸಿದ್ದು, ಪೊಲೀಸ್ ಪಡೆಗೆ ವಿಪರೀತ ಹವಾಮಾನದಿಂದ ಸಂರಕ್ಷಣೆ ನೀಡುವುದಲ್ಲದೆ, ಜನದಟ್ಟಣೆ ಅವಧಿಯಲ್ಲಿ ಸರಾಗವಾಗಿ ಕೆಲಸ ಮಾಡುವ ಅವಕಾಶ ಮಾಡಿಕೊಡಲಿದೆ. ಜೊತೆಗೆ ನಾಗರಿಕರು ಪೊಲೀಸರೊಂದಿಗೆ ಸುಲಭವಾಗಿ ಸಂಪರ್ಕ ಹೊಂದುವ ಕೇಂದ್ರವಾಗಿ ಕಾರ್ಯನಿರ್ವಹಿಸುವ ಉದ್ದೇಶದೊಂದಿಗೆ ಇವುಗಳನ್ನು ದಾನ ನೀಡಲಾಗಿದೆ.

ಪ್ರತಿ ಕ್ಯಾಬಿನ್‍ನಲ್ಲಿ ಸಭೆ ನಡೆಸುವ ಪ್ರದೇಶವಿದ್ದು, ಜೊತೆಗೆ ನಾಲ್ಕು ಬಂಕರ್ ಬೆಡ್‍ಗಳು ಮತ್ತು ವಾಷ್‍ ರೂಂ ಇದೆ. ಕ್ಯಾಬಿನ್‍ಗಳು ವಿದ್ಯುತ್ ಮಿತವ್ಯಯದ ಎಲ್‍ಇಡಿ ದೀಪಗಳು, ಸೀಲಿಂಗ್ ಫ್ಯಾನ್‍ಗಳನ್ನು ಒಳಗೊಂಡಿದೆ. ಏರ್ ಕಂಡೀಷನಿಂಗ್‍ಗೆ ಕೂಡ ಇದರಲ್ಲಿ ಅವಕಾಶ ಮಾಡಿಕೊಡಲಾಗಿದ್ದು, ಅವುಗಳ ಮೇಲಿನ ಭಾಗದಲ್ಲಿ 300 ಲೀಟರ್ ಸಾಮರ್ಥ್ಯ ಹೊಂದಿರುವ ನೀರಿನ ಟ್ಯಾಂಕ್ ಇರುತ್ತದೆ. ಜೊತೆಗೆ ಅಡುಗೆ ಮನೆಗೆ ಕೂಡ ಸ್ಥಳಾವಕಾಶ ಮಾಡಿಕೊಡಲಾಗಿರುತ್ತದೆ.

ಬಿ.ಐ.ಎ.ಎಲ್.ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ರಮವು ಸಮಾಜಕ್ಕೆ ಮೌಲ್ಯವರ್ಧನೆ ನೀಡುವಂತಹ ಮೂಲ ಸೌಕರ್ಯ ಸೃಷ್ಟಿಸುವತ್ತ ಗಮನ ಕೇಂದ್ರೀಕರಿಸಿದೆ. ಸಮುದಾಯಗಳನ್ನು ಸುರಕ್ಷಿತವಾಗಿರಿಸುವುದಕ್ಕಲ್ಲದೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯನ್ನು ಸರಾಗವಾಗಿಸುವುದಕ್ಕಾಗಿ ಪೊಲೀಸರ ಪ್ರಯತ್ನಗಳಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಈ ಚಿಂತನೆ ಮಾಡಲಾಗಿದೆ ಎಂದು ಉಪಸ್ಥಿತರಿದ್ದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ತಿಳಿಸಿದರು.

ABOUT THE AUTHOR

...view details