ಬೆಂಗಳೂರು :ರಾಜ್ಯಾದ್ಯಂತ ಜಲಮಿಷನ್ ಯೋಜನೆಯಡಿ 'ಮನೆ ಮನೆಗೆ ಗಂಗೆ 'ಎಂಬ ಕಾರ್ಯಕ್ರಮದಡಿ ಒಟ್ಟು 97.91 ಲಕ್ಷ ನಲ್ಲಿ ಸಂಪರ್ಕ ಕೊಟ್ಟಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ವಿಧಾನಸಭೆಯಲ್ಲಿ ಇಂದು ತಿಳಿಸಿದರು. 2022-23ನೇ ಸಾಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಅನುದಾನ ಬೇಡಿಕೆಗಳ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಸಚಿವರು, ಇದರಲ್ಲಿ 45.4 ಲಕ್ಷ ನಲ್ಲಿಗೆ ನೀರು ಸಂಪರ್ಕ ಕಲ್ಪಿಸಿದ್ದೇವೆ. ರಸ್ತೆಗಳ ಅಭಿವೃದ್ಧಿ, ಗ್ರಾಮ ಪಂಚಾಯತ್ ಅಭಿವೃದ್ಧಿಗೂ ಒತ್ತು ನೀಡಿದ್ದೇವೆ ಎಂದರು.
ಜಲಜೀವನ ಮಿಷನ್ ಯೋಜನೆಯಡಿ 2,692 ಕೋಟಿ ರೂ. ಖರ್ಚಾಗಿದೆ. ಈ ಯೋಜನೆ ಆರಂಭದಲ್ಲಿ ವಿಳಂಬವಾಗಿದ್ದು ನಿಜ. ನೀರಿನ ಮೂಲಕ್ಕಾಗಿ ಕೆರೆ ಹಾಗೂ ನದಿ ನೀರು ಬಳಕೆ ಮಾಡುತ್ತೇವೆ. 48,890 ಕೆರೆಗಳನ್ನು ಅಭಿವೃದ್ದಿಪಡಿಸಲಾಗಿದೆ. ಹಾಗೆ ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಗುತ್ತಿಗೆದಾರರು ನಿರ್ವಹಿಸುವ ಕಾಮಗಾರಿಯ ಪರಿಶೀಲನೆಗೆ ಗ್ರಾಮೀಣಾಭಿವೃದ್ದಿ ಅಧಿಕಾರಿ ಹಾಗೂ ಕಾರ್ಯ ನಿರ್ವಹಣಾಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದರು.