ಕರ್ನಾಟಕ

karnataka

By

Published : Sep 16, 2021, 4:37 PM IST

ETV Bharat / city

'ಜನರ ತೆರಿಗೆ ಹಣದಲ್ಲಿ ಕೆಲವು ಅಧಿಕಾರಿಗಳ ಶೋಕಿ': ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ.ಮಹೇಶ್ ಪರೋಕ್ಷ ವಾಗ್ದಾಳಿ

ಜನರ ತೆರಿಗೆ ಹಣದಲ್ಲಿ ಶೋಕಿ ಮಾಡಿಕೊಂಡು ಕೆಲವು ಅಧಿಕಾರಿಗಳು ಬದುಕುತ್ತಿದ್ದಾರೆ ಎಂದು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ವಿಧಾನಸಭೆ ಕಲಾಪದಲ್ಲಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

JDS MLA Sa.ra.Mahesh unsatisfied about ias officer sindhuri in assembly session
ಜನರ ತೆರಿಗೆ ಹಣದಲ್ಲಿ ಕೆಲ ಅಧಿಕಾರಿಗಳಿಂದ ಶೋಕಿ; ಐಪಿಎಸ್‌ ಅಧಿಕಾರಿ ಸಿಂಧೂರಿ ವಿರುದ್ಧ ಸಾ.ರಾ.ಮಹೇಶ್ ಪರೋಕ್ಷ ವಾಗ್ದಾಳಿ

ಬೆಂಗಳೂರು:ಕೋವಿಡ್ ಕಾಲದಲ್ಲಿ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಸಾಕಷ್ಟು ಸಹಕಾರ ಕೊಟ್ಟಿದ್ದಾರೆ. ಆದರೆ ಕೆಲವು ಅಧಿಕಾರಿಗಳು ಮಾತ್ರ ಭ್ರಷ್ಟರಾಗಿ ಬದುಕುತ್ತಿದ್ದಾರೆ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಪರೋಕ್ಷವಾಗಿ ರೋಷಾವೇಷದಿಂದ ಮಾತನಾಡಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಪರೋಕ್ಷ ವಾಗ್ದಾಳಿ

ಬೆಲೆ ಏರಿಕೆ ಸಂಬಂಧಿಸಿದಂತೆ ಸದನದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಸಾ.ರಾ.ಮಹೇಶ್, ಜನರ ತೆರಿಗೆ ಹಣದಲ್ಲಿ ಶೋಕಿ ಮಾಡಿಕೊಂಡು ಬದುಕುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಜೇಬಿನಲ್ಲಿ ಬ್ಯಾಗ್ ಇಟ್ಟುಕೊಂಡು ಬಂದಿದ್ದ ಸಾ.ರಾ ಮಹೇಶ್ ಸದನದಲ್ಲಿ ಬ್ಯಾಗ್ ಪ್ರದರ್ಶನ ಮಾಡಿ, ರೋಹಿಣಿ ಸಿಂಧೂರಿ ಹೆಸರು ಹೇಳದೇ ವಿಚಾರ ಪ್ರಸ್ತಾಪಿಸಿ 15 ಲಕ್ಷದ ಬ್ಯಾಗ್ ಖರೀದಿಸಲಾಗಿದ್ದು, ಇದರಲ್ಲಿ 6.5 ಕೋಟಿ ರೂ.ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ನಾವೇನಾದರೂ ಲೂಟಿ ಮಾಡಿದ್ದರೆ ಜನರಿಗಾದರೂ ಕೊಡುತ್ತೇವೆ. ಇವರು (ಅಧಿಕಾರಿಗಳು) ಲೂಟಿ ಮಾಡಿದರೆ ಯಾರಿಗೆ ಕೊಡುತ್ತಾರೆ?. ಕುಮಾರಸ್ವಾಮಿ, ಯಡಿಯೂರಪ್ಪ, ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿಯೂ ಇವರೇ ಇರುತ್ತಾರೆ. ಒಬ್ಬೊಬ್ಬ ಅಧಿಕಾರಿಗಳ ಬಳಿ 500 ಕೋಟಿ ರೂ. ಆಸ್ತಿ ಇದೆ. ಇಲ್ಲಿ ಲೂಟಿ ಮಾಡಿ ಆಂಧ್ರದಲ್ಲಿ ಆಸ್ತಿ ಮಾಡುತ್ತಿದ್ದಾರೆ. ನಿವೃತ್ತರಾದ ಮೇಲೆ ಮತ್ತೆ ನಮ್ಮ ಎದುರು ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಹಿಂದಿನ ಜಿಲ್ಲಾಧಿಕಾರಿ ನುಂಗಿದ್ದ ದುಡ್ಡು 6 ಕೋಟಿ ರೂ. ಒಬ್ಬ ಮಂತ್ರಿ ಮನೆ ರಿಪೇರಿಗೆ 5 ಲಕ್ಷ ಕೊಡುತ್ತಾರೆ. ಅಧಿಕಾರಿ ಮನೆ ರಿಪೇರಿಗೆ 50 ಲಕ್ಷ ರೂ. ನೀಡಲಾಗುತ್ತದೆ. ಐಎಎಸ್ ಅಧಿಕಾರಿಗಳ ವಿರುದ್ಧದ ಪ್ರಕರಣವನ್ನು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು. ಇಂಜಿನಿಯರ್, ಸಣ್ಣಪುಟ್ಟ ಅಧಿಕಾರಿಗಳ ಮೇಲೆ ಮಾತ್ರ ಐಟಿ, ಎಸಿಬಿ ದಾಳಿ ಆಗುತ್ತದೆ. ಆದರೆ, ಐಎಎಸ್, ಐಪಿಎಸ್ ಮನೆಗಳ ಮೇಲೆ ಐಟಿ ರೇಡ್ ಆಗುತ್ತಾ? ಸರ್ಕಾರಕ್ಕೆ ಕ್ರಮ ತಗೆದುಕೊಳ್ಳುವ ತಾಕತ್ತು ಇದೆಯೇ? ಎಂದು ಸದನದಲ್ಲಿ ಭಾವೋದ್ವೇಗದಿಂದ ಅವರು ಮಾತನಾಡಿದರು.

20 ರಿಂದ 40 ವರ್ಷದೊಳಗಿನ ಮಹಿಳಾ ಅಧಿಕಾರಿಗಳಿದ್ದರೆ ನಮ್ಮವರೇ ನಮಗೆ ವಿಲನ್ ಆಗ್ತಾರೆ. ಮಹಿಳಾ ಅಧಿಕಾರಿಗಳು ಅನ್ನೋದೇ ಕೆಲವರಿಗೆ ಅಡ್ವಾಟೇಂಜ್ ಆಗಿದೆ ಎಂದು ಸಾ.ರಾ. ಮಹೇಶ್ ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವರ ಮುಂದೆ ನಾವು ಬದುಕೋಕೆ ಆಗುತ್ತೇನ್ರಿ? ಅಧಿಕಾರಿಗಳನ್ನು ನೀವು ಮಟ್ಟ ಹಾಕದೇ ಇದ್ದರೆ ಸರ್ಕಾರದ ಆಸ್ತಿಯನ್ನು ಲೂಟಿ ಮಾಡುತ್ತಾರೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಂದಾಯ ಸಚಿವ ಆರ್.ಅಶೊಕ್‍, ಶಾಸಕರು ಈ ಪ್ರಕರಣವನ್ನು ಹಕ್ಕು ಚ್ಯುತಿಗೆ ನೀಡಿದ್ದಾರೆ. ಆ ಸಂದರ್ಭದಲ್ಲಿ ಅವರು ಚರ್ಚಿಸಬಹುದು ಎಂದು ಹೇಳಿದರು.

ಈ ವೇಳೆ ಸಾ.ರಾ.ಮಹೇಶ್ ಬೆಂಬಲಕ್ಕೆ ನಿಂತ ಹೆಚ್.ಡಿ.ಕುಮಾರಸ್ವಾಮಿ, ಒಬ್ಬ ಸರ್ಕಾರಿ ಅಧಿಕಾರಿ ಒಬ್ಬ ಜನಪ್ರತಿನಿಧಿ ವಿರುದ್ಧ ನೇರವಾಗಿ ಮಾಧ್ಯಮಗಳ ಮುಂದೆ ಮಾತನಾಡುವ ಅಧಿಕಾರವನ್ನು ಯಾರು ಕೊಟ್ಟಿದ್ದಾರೆ ಎನ್ನುವುದು ಗೊತ್ತಿಲ್ಲ. ಯಾವ ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಶ್ನಿಸಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿಯೇ ಮೈಸೂರಿಗೆ ತೆರಳಿ ಅಲ್ಲಿ ಗಲಾಟೆ ಮಾಡಿಕೊಂಡ ಇಬ್ಬರು ಐಎಎಸ್ ಅಧಿಕಾರಿಗಳ ಜೊತೆ ಮಾತನಾಡುತ್ತಾರೆ. ಇದು ಯಾವ ರೀತಿಯ ಆಡಳಿತ?. ಇದು ಎಲ್ಲಿಗೆ ಬಂದು ನಿಲ್ಲುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಚಿವ ಆರ್.ಅಶೋಕ್‍, ಕೆಲವು ಅಧಿಕಾರಿಗಳು ಪ್ರಚಾರದ ಹುಚ್ಚಿನಿಂದ ಓವರ್ ಆ್ಯಕ್ಟಿಂಗ್ ಮಾಡುತ್ತಿದ್ದಾರೆ. ಇನ್ನು ಮುಂದೆ ಅಂತಹ ಪ್ರಕರಣಗಳು ಬೆಳಕಿಗೆ ಬಂದರೆ, ಮುಖ್ಯಮಂತ್ರಿಗಳು ಅದನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಈ ಬಗ್ಗೆ ನಾನು ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ. ಅವರು ಅಧಿಕಾರಿಗಳು ಅನಗತ್ಯ ಹೇಳಿಕೆ ನೀಡುವುದನ್ನು ತಡೆಯುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.

ABOUT THE AUTHOR

...view details