ಕರ್ನಾಟಕ

karnataka

By

Published : Sep 17, 2021, 5:19 PM IST

ETV Bharat / city

ತಮಿಳುನಾಡು ರೀತಿ ಎಲ್ಲಾ ಸರ್ಕಾರಗಳು ಇಂಧನ ಬೆಲೆ ಕಡಿಮೆ ಮಾಡಬೇಕು: ಹೆಚ್‌.ಡಿ.ದೇವೇಗೌಡ

ರಾಜ್ಯ ಸರ್ಕಾರ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಪೆಟ್ರೋಲ್ ಹೊರೆ ತಗ್ಗಿಸಬೇಕು. ನಾವು ಕೂಡ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುತ್ತೇವೆ- ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ.

JDS leader HD Devegowda
ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ

ಬೆಂಗಳೂರು:ತಮಿಳುನಾಡು ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಲೀ.ಗೆ 3 ರೂ.ಕಡಿತ ಮಾಡಿದೆ. ಇಡೀ ದೇಶಕ್ಕೆ ಅದೊಂದು ಇಂಡಿಕೇಷನ್. ಅದರ ಬಗ್ಗೆ ನಾನು ಅಲ್ಲಗಳೆಯಲ್ಲ. ಇದೇ ಮಾದರಿಯನ್ನು ಬೇರೆ ರಾಜ್ಯಗಳು ಕೂಡ ಪಾಲಿಸಬೇಕು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್​​.ಡಿ.ದೇವೇಗೌಡ ಹೇಳಿದರು.

ರಾಜ್ಯ ಸರ್ಕಾರ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಪೆಟ್ರೋಲ್ ಹೊರೆಯನ್ನು ತಗ್ಗಿಸಬೇಕು. ನಾವು ಕೂಡ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದರು.

ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಮಾಧ್ಯಮಗೋಷ್ಠಿ

'ಕಲಬುರಗಿ ಪಾಲಿಕೆ ಚುಕ್ಕಾಣಿ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ'

ಖರ್ಗೆ ತೆಗೆದುಕೊಂಡ ನಿರ್ಧಾರವನ್ನು ಉಳಿದವರು ಸ್ವಾಗತಿಸಲಿಲ್ಲ. ಇದು ದೇಶಕ್ಕೆ ಸಂಬಂಧಪಟ್ಟಿದ್ದಲ್ಲ. ಇದು ಕಾರ್ಪೊರೇಷನ್ ಚುನಾವಣೆ. ಸ್ಥಳೀಯ ಮಟ್ಟದಲಿ ಹೊಂದಾಣಿಕೆಯಾಗುತ್ತದೆ. ಖರ್ಗೆ ಮಾತಿಗೆ ಡಿಕೆಶಿ ಹಾಗೂ ಸಿದ್ದರಾಮಯ್ಯ ಸ್ಪಂದಿಸಿಲ್ಲ. ಅವರ ಮಾತಿಗೆ ಯಾರೂ ಬೆಲೆ ಕೊಡಲಿಲ್ಲ. ಇದನ್ನು ಖರ್ಗೆಯವರು ತೀರ್ಮಾನ ಮಾಡ್ತಾರಾ? ಎಂದು ಹೆಚ್​​ಡಿಡಿ ಪ್ರಶ್ನಿಸಿದರು.

ಕಳೆದ ಬಾರಿ ನಾನು ಅವರ ಮನೆ ಬಾಗಿಲಿಗೆ ಹೋಗಿಲ್ಲ. ಗುಲಾಂ ನಬಿ ಆಜಾದ್ ಸೇರಿ ಹಲವರು ಮನೆಗೆ ಬಂದರು. ನಿಮ್ಮ ಮಗನನ್ನು ಸಿಎಂ ಮಾಡಿ ಎಂದರು. ನಾನು ಖರ್ಗೆಯವರನ್ನು ಸಿಎಂ ಮಾಡಿ ಅಂದಿದ್ದೆ. ಈಗ ಕಾಂಗ್ರೆಸ್ ನವರು ನಮ್ಮ ಪಕ್ಷ ನಾಶ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ಹಾಗೂ ಮುಸ್ಲೀಮರನ್ನು ದೂರ ಇಡಲು ಪ್ರಯತ್ನ‌ ಮಾಡುತ್ತಿದ್ದಾರೆ ಎಂದು ದೂರಿದರು.

2023ಕ್ಕೆ ಇದೇ ಮುಸ್ಲೀಮರು ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರ್ತಾರೆ. ಅಹಿಂದ ಬಗ್ಗೆ ಜನ ಪುರಸ್ಕಾರ ಅಥವಾ ತಿರಸ್ಕಾರ ಮಾಡ್ತಾರಾ? ಅಂತ ಕಾದು ನೋಡಬೇಕು. ನಾನು ಈವರೆಗೆ ಎಷ್ಟು ಜನ ಮುಸ್ಲಿಂ ಮುಖಂಡರನ್ನು ಬೆಳೆಸಿದ್ದೇನೆ. ನಾನು ಬರುವ ಮುಂಚೆ ಎಷ್ಟು ಜನ ಮುಸ್ಲಿಂ ನಾಯಕರು ಇದ್ದರು?. ನಜೀರ್ ಸಾಬ್ ಮೊದಲೇ ಬೆಳೆದಿರುವ ನಾಯಕ. ಜಾಫರ್ ಷರೀಫ್, ಸಿಎಂ ಇಬ್ರಾಹಿಂ, ಮೆರಾಜುದ್ದೀನ್ ಪಟೇಲ್ ಸೇರಿ ಅನೇಕ‌ ನಾಯಕರು ನನ್ನ ಜೊತೆ ಬೆಳೆದರು. ಡಿಜಿ ಅವರಿಗೆ ಕರೆದು ಮುಸ್ಲಿಂ ಕಾನ್ಸ್​​ಸ್ಟೇಬಲ್ ಎಷ್ಟಿದ್ದಾರೆ ನೋಡಿ?. ನಾನು ದೇವರನ್ನು ನಂಬುತ್ತೇನೆ. ದೇವರು, ಅಲ್ಲಾ ಒಂದೇ ನನಗೆ ಎಂದರು.

ಕಲಬುರಗಿ ಪಾಲಿಕೆ ಮೇಯರ್ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ ಮಾಡ್ಕೋತೀರಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್​ಡಿಡಿ ಬಿಜೆಪಿಯವರು ಕಲಬುರಗಿ ವಿಚಾರವಾಗಿ‌ ಈಗ ಮಾತನಾಡುತ್ತಿಲ್ಲ. ಅಶೋಕ್ ಒಬ್ಬರೇ ಬಂದು ಮಾತನಾಡಿದ್ದಾರೆ. ಈ ಚುನಾವಣೆಯಲ್ಲಿ ಜನ ನಮ್ಮ ಪಕ್ಷಕ್ಕೆ ಹೊಸ ಸೂಚನೆ ನೀಡಿದ್ದಾರೆ. ಕಲಬುರಗಿ ಪಾಲಿಕೆ ಬಗ್ಗೆ ಯಾವ ತೀರ್ಮಾನವನ್ನೂ ನಾವು ಮಾಡಿಲ್ಲ. ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳಲ್ಲ ಎಂದರು.

ನಂಜನಗೂಡು ದೇವಸ್ಥಾನ ತೆರವು, ಚಾಮರಾಜನಗರ ವಿಚಾರ ನೋಡಿದೆ. ಅಧಿಕಾರಿಗಳು ಆತುರದ ನಿರ್ಧಾರ ತೆಗೆದುಕೊಂಡಿದ್ದಾರೆ. ಕೋರ್ಟ್ ಸೂಚನೆ ನೀಡಿರಬಹುದು. ಆದರೆ ಬೆಂಗಳೂರಿನಲ್ಲಿ ಮುಖಂಡರ ಪ್ರತಿಮೆಗಳನ್ನು ಕಿತ್ತು ಹಾಕಬೇಕೆಂಬ ಆದೇಶ ಇದೆ. ಕೋರ್ಟ್ ಆದೇಶ ತಿರಸ್ಕರಿಸಲು ಆಗಲ್ಲ. ಇಂತಹ ನಿರ್ಣಯಗಳನ್ನು ಅನುಮತಿ ಪಡೆದು ತೆಗದುಕೊಳ್ಳಬೇಕು ಎಂದರು.

ಕರ್ನಾಟಕದ ಆಡಳಿತ ಬಗ್ಗೆ ಚರ್ಚೆ ಮಾಡಲ್ಲ. ಭ್ರಷ್ಟಾಚಾರ ಎಲ್ಲೆಲ್ಲಿ ನಡೆದಿದೆ ಗೊತ್ತಿದೆ. ಬೆಲೆ ಏರಿಕೆ ಬಗ್ಗೆ ಸಿದ್ದರಾಮಯ್ಯ ನಾಲ್ಕು ಗಂಟೆ ಚರ್ಚೆ ಮಾಡಿದ್ರು. ನಮ್ಮ ಸರ್ಕಾರದ ಹೋರಾಟ ತೋರ್ಪಡಿಕೆಗೆ ಅಲ್ಲ. ವಾಜಪೇಯಿ ಸರ್ಕಾರದಲ್ಲಿ ಸೀಮೆಎಣ್ಣೆಗೆ ಒಂದು ರೂ.ಏರಿಕೆಯಾಯಿತು. ಇದೇ ಸೀಮೆ ಎಣ್ಣೆ ಡಬ್ಬ ತಲೆ ಮೇಲೆ ಇಟ್ಟುಕೊಂಡು ಹೋರಾಟ ಮಾಡಿದ್ದೇವು ಎಂದರು.

24 ಮಂದಿ ಮುಸ್ಲಿಂ ಮುಖಂಡರು ಜೆಡಿಎಸ್​​ಗೆ ಸೇರ್ಪಡೆ:

ಇಂದು ಜೆಡಿಎಸ್ ಪಕ್ಷದ ಕಚೇರಿಯಲ್ಲಿ ನಗರದ ಮುಸಲ್ಮಾನರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ನಡೆಯಿತು. ಸಾಂಕೇತಿಕವಾಗಿ 24 ಮುಸ್ಲಿಂ ಮುಖಂಡರಿಗೆ ಜೆಡಿಎಸ್ ಶಾಲು ಹಾಕುವ ಮೂಲಕ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು.

ABOUT THE AUTHOR

...view details