ಬೆಂಗಳೂರು: ಕುವೆಂಪು ರಚಿಸಿದ ನಾಡಗೀತೆಯನ್ನು ಅಶ್ಲೀಲವಾಗಿ ತಿರುಚಿ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ ರೋಹಿತ್ ಚಕ್ರತೀರ್ಥರನ್ನು ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಬೇಕು ಹಾಗೂ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಜನಸಾಮಾನ್ಯ ಒಕ್ಕಲಿಗರ ವೇದಿಕೆ ಪ್ರತಿಭಟನೆ ನಡೆಸಿತು.
ನಗರದ ಮೌರ್ಯ ಹೋಟೆಲ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಜನಸಾಮಾನ್ಯ ಒಕ್ಕಲಿಗರ ವೇದಿಕೆ ರಾಜ್ಯಾಧ್ಯಕ್ಷ ಬಿ.ಟಿ.ನಾಗಣ್ಣ, ಕುವೆಂಪು ಅವರು ನಾಡು ಕಂಡ ಅತ್ಯಂತ ಶೇಷ್ಠ ಸಾಹಿತಿಗಳಲ್ಲಿ ಒಬ್ಬರು. ಅವರು ರಚಿಸಿದ ನಾಡಗೀತೆಯನ್ನು ಅಶ್ಲೀಲವಾಗಿ ತಿರುಚಿ ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ರೋಹಿತ್ ಚಕ್ರತೀರ್ಥ ಒಕ್ಕಲಿಗ ಸಮುದಾಯಕ್ಕೆ ಮಾತ್ರವಲ್ಲದೇ ಇಡೀ ನಾಡಿಗೆ ಅವಮಾನ ಮಾಡಿದ್ದಾರೆ.
ಜನಸಾಮಾನ್ಯ ಒಕ್ಕಲಿಗರ ವೇದಿಕೆಯಿಂದ ಚಕ್ರತೀರ್ಥ ಬಂಧನಕ್ಕೆ ಆಗ್ರಹ ನಾಡಗೀತೆ ತಿರುಚಿದ್ದು ಮಾತ್ರವಲ್ಲದೇ, ಕುವೆಂಪು ಅವರನ್ನು ವಿಶ್ವಮಾನವ ಎಂದು ಕರೆಯುವುದನ್ನೂ ವ್ಯಂಗ್ಯವಾಡಿದ್ದಾರೆ. ಕನ್ನಡ ಧ್ವಜವನ್ನು ತನ್ನ ಒಳ ಉಡುಪಿಗೆ ಹೋಲಿಸಿ ವ್ಯಂಗ್ಯವಾಡಿದ್ದಾರೆ. ಕುವೆಂಪುರವರ ಆಯ್ದ ಸಾಲುಗಳನ್ನು ಮುಂದಿಟ್ಟುಕೊಂಡು ಅವರ ವಿರುದ್ಧ ಅವಹೇಳನಕಾರಿಯಾಗಿ ಪತ್ರಿಕೆಯೊಂದಕ್ಕೆ ಲೇಖನವನ್ನೂ ಇವರು ಬರೆದಿದ್ದರು. ಇಂತಹವರಿಗೆ ಪಠ್ಯಪುಸ್ತಕ ಪರಿಶೀಲನಾ ಸಮಿತಿಯಂತಹ ಜವಾಬ್ದಾರಿಯುತ ಸ್ಥಾನ ನೀಡುವ ಮೂಲಕ ರಾಜ್ಯ ಸರ್ಕಾರ ದೊಡ್ಡ ತಪ್ಪು ಮಾಡಿದೆ ಎಂದು ಹೇಳಿದರು.
ರಾಜ್ಯ ಸರ್ಕಾರವು ಪಠ್ಯಪುಸ್ತಕ ಪರಿಶೀಲನಾ ಸಮಿತಿಯಿಂದ ರೋಹಿತ್ ಚಕ್ರತೀರ್ಥ ಅವರನ್ನು ವಜಾ ಮಾಡಬೇಕು ಹಾಗೂ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಶೀಘ್ರವೇ ಬಂಧಿಸಬೇಕು. ಇದು ನಾಡಿನ ಸಮಸ್ತ ಒಕ್ಕಲಿಗರ ಸ್ವಾಭಿಮಾನದ ಪ್ರಶ್ನೆ. ರಾಷ್ಟ್ರಕವಿ ಕುವೆಂಪುರವರಿಗೆ ಮಾಡಿದ ಈ ಅವಮಾನವನ್ನು ನೋಡಿಕೊಂಡು ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಬಿ.ಟಿ.ನಾಗಣ್ಣ ಹೇಳಿದರು.
ಹಿರಿಯ ವಕೀಲ ನಂಜಪ್ಪ ಕಾಳೇಗೌಡ ಮಾತನಾಡಿ, ಈಗಾಗಲೇ ಅನೇಕ ಸ್ವಾಮೀಜಿಗಳು, ಸಾಹಿತಿಗಳು, ಸಂಘಟನೆಗಳು, ಗಣ್ಯ ವ್ಯಕ್ತಿಗಳು ರೋಹಿತ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸಾಹಿತಿಗಳಾದ ದೇವನೂರು ಮಹಾದೇವ, ಜಿ.ರಾಮಕೃಷ್ಣ ಅವರು ಸೇರಿದಂತೆ ಹತ್ತಕ್ಕೂ ಹೆಚ್ಚು ಸಾಹಿತಿಗಳು ತಮ್ಮ ಲೇಖನಗಳನ್ನು ಪಠ್ಯಪುಸ್ತಕದಿಂದ ಕೈಬಿಡಿ ಎಂದು ಆಗ್ರಹಿಸಿದ ಘಟನೆಯೂ ನಡೆದುಹೋಗಿದೆ. ಸರ್ಕಾರಕ್ಕೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ. ಕನ್ನಡ ಹಾಗೂ ಕುವೆಂಪು ವಿರೋಧಿಗಳಿಗೆ ಬೆನ್ನೆಲುಬಾಗಿ ನಿಲ್ಲುವ ಮೂಲಕ ರಾಜ್ಯ ಸರ್ಕಾರವು ನಾಡದ್ರೋಹ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಚನ್ನಪ್ಪ ಕಾಳೇಗೌಡ, ಮಲ್ಲೇಶ್ ಗೌಡ, ಮಂಜುನಾಥ್, ಚನ್ನಕೇಶವ, ನರಸಿಂಹಮೂರ್ತಿ, ರವಿಗೌಡ, ಸಚಿನ್ ಹಾಗೂ ಇನ್ನಿತರ ಮುಖಂಡರು, ವೇದಿಕೆಯ ಕಾರ್ಯಕರ್ತರು ಭಾಗವಹಿಸಿದ್ದರು.
ಇದನ್ನೂ ಓದಿ:ಚಕ್ರತೀರ್ಥರನ್ನು ಸಮಿತಿಯಿಂದ ವಜಾಗೊಳಿಸಿ: ಪಾಂಡೋಮಟ್ಟಿ ಶ್ರೀ ಗುರುಬಸವ ಸ್ವಾಮೀಜಿ