ಬೆಂಗಳೂರು: ಸ್ಯಾಂಡಲ್ ವುಡ್ ನಟ-ನಟಿಯರ ಡ್ರಗ್ಸ್ ಬಳಕೆ ಬಗ್ಗೆ ಮಾಹಿತಿ ಇರುವುದಾಗಿ ಹೇಳಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಾಳೆ ಸಿಸಿಬಿ ಪೊಲೀಸರ ಮುಂದೆ ಹಾಜರಾಗಲಿದ್ದಾರೆ.
ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ನಾಳೆ 11.30ಕ್ಕೆ ತೆರಳಲಿರುವ ಇಂದ್ರಜಿತ್ ಲಂಕೇಶ್, ಸಿಸಿಬಿ ಡಿಸಿಪಿ ರವಿಕುಮಾರ್ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಟ ನಟಿಯರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಪ್ರಭಾವಿಗಳ ಮಕ್ಕಳು ತೊಡಗಿಸಿಕೊಂಡಿದ್ದಾರೆ. ಅವರಿಗೆ ರಾಜಕೀಯ ರಕ್ಷಣೆಯಿದೆ. ಪೊಲೀಸರು ಭದ್ರತೆ ನೀಡುವುದಾದರೆ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸುವೆ ಎಂದು ಲಂಕೇಶ್ ಸ್ಫೋಟಕ ಹೇಳಿಕೆ ನೀಡಿದ್ದರು.
ಸದ್ಯ ಇಂದ್ರಜಿತ್ ಹೇಳಿಕೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಬೆಂಗಳೂರು ಪೊಲೀಸರು ಮಾಹಿತಿ ಪಡೆದುಕೊಂಡು ಭದ್ರತೆ ನೀಡುವುದಾಗಿ ಹೇಳಿತ್ತು. ಈ ಸಂಬಂಧ ನಾಳೆ ವಿಚಾರಣೆಗೆ ಕರೆದಿದ್ದು ಯಾವೆಲ್ಲ ಸತ್ಯಗಳು ಬಹಿರಂಗವಾಗಲಿವೆ ಎಂದು ಕಾಯ್ದು ನೋಡಬೇಕಾಗಿದೆ.