ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಇಲ್ಲಿಯವರೆಗೆ ನಡೆಸಿರುವ ತನಿಖೆಯ ಪ್ರಗತಿ ವರದಿಯನ್ನು ಹೈಕೋರ್ಟ್ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆ ಮಾಡಲಾಗಿದೆ.
ಐಎಂಎ ವಂಚನೆ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಮತ್ತು ನ್ಯಾಯಮೂರ್ತಿ ಹೆಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆಯಿತು.
ಈ ವೇಳೆ ನ್ಯಾಯಲಯಕ್ಕೆ ಸರ್ಕಾರದ ಅಡ್ವಕೇಟ್ ಜನರಲ್ ಪ್ರಭುಲಿಂಗ್ ನಾವಡಗಿಯವರು ಇಲ್ಲಿಯವರೆಗೆ ನಡೆದಿರುವ ತನಿಖಾ ವರದಿಯನ್ನ ನೀಡಿ, ಎಸ್ಐಟಿ ಏಜೆನ್ಸಿಯಿಂದಲು ತನಿಖೆಯಾಗುತ್ತಿದೆ. ಹಲವಾರು ವ್ಯಕ್ತಿಗಳನ್ನ ಬಂಧಿಸಿದ್ದಾರೆ ಎಂದು ತಿಳಿಸಿದರು.
ತನಿಖಾ ವರದಿಯನ್ನ ಪರಿಶೀಲಿಸಿದ ಹೈಕೋರ್ಟ್, ತನಿಖೆಯಲ್ಲಿ ಕೆಲವು ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಸದ್ಯದ ಸ್ಥಿತಿಯಲ್ಲಿ ಸಿಬಿಐಗೆ ಪ್ರಕರಣ ವಹಿಸುವ ಅಗತ್ಯವಿಲ್ಲ. ತನಿಖೆಯಲ್ಲಿ ಸ್ವಲ್ಪ ಪ್ರಗತಿಯಾಗಿರುವುದು ಗಮನಿಸಿದ್ದೇವೆ. ಪ್ರಗತಿಯ ವಿವರವನ್ನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ. ಎಸ್ಐಟಿಗೆ ಸ್ವಲ್ಪ ಕಾಲಾವಕಾಶ ನೀಡೋಣ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ಅಭಿಮತ ವ್ಯಕ್ತಪಡಿಸಿದರು.
ಇನ್ನು ತನಿಖಾ ಪ್ರಗತಿ ವರದಿಯನ್ನ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ಗೆ ನೀಡಿ, ಮುಂದಿನ ಆದೇಶದವರೆಗೆ ಲಕೋಟೆ ತೆರೆಯದಂತೆ ಸೂಚನೆ ನೀಡಿ ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿಕೆ ಮಾಡಲಾಗಿದೆ.