ಬೆಂಗಳೂರು :ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗ್ತಿದೆ. ಕಳೆದ ಸಲ ಕೋವಿಡ್ ಭೀತಿ ಇದ್ದರೆ, ಈ ಬಾರಿ ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ ಕಾವು ಹೆಚ್ಚಾಗಿದೆ. ಪರೀಕ್ಷಾ ಕೇಂದ್ರಕ್ಕೆ ಹಿಜಾಬ್ ಧರಿಸಿಯೇ ವಿದ್ಯಾರ್ಥಿನಿಗಳು ಆಗಮಿಸಿದ್ದರು. ನಗರದ ಮಲ್ಲೇಶ್ವರಂನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿಯೇ ವಿದ್ಯಾರ್ಥಿನಿಯರು ಬಂದಿದ್ದಾರೆ. ಆದರೆ, ಪರೀಕ್ಷಾ ಕೊಠಡಿಗೆ ಹಿಜಾಬ್ ತೆಗೆದಿರಿಸಿ ತೆರಳಿದ್ದಾರೆ.
ಈ ವೇಳೆ ಮಾತನಾಡಿದ ವಿದ್ಯಾರ್ಥಿನಿ ಆಸಿಯಾ ಬಿ., ಮನೆಯಿಂದ ಬರುವಾಗ ಹಿಜಾಬ್ ಧರಿಸಿಯೇ ಬಂದಿದ್ದೇನೆ. ಪರೀಕ್ಷಾ ಕೊಠಡಿಯಲ್ಲಿ ಹಿಜಾಬ್ ಧರಿಸುವುದಿಲ್ಲ. ಹಿಜಾಬ್ ತೆಗೆದು ಪರೀಕ್ಷೆ ಬರೆಯುತ್ತೇನೆ. ಪರೀಕ್ಷೆ ಬರೆಯದೇ ಹೋದರೆ ನನ್ನ ಭವಿಷ್ಯ ಹಾಳಾಗುತ್ತದೆ. ಹಿಜಾಬ್ ಬೇಕು. ಆದರೆ, ಸರ್ಕಾರ ಹೇಳುವ ನಿಯಮವನ್ನೂ ಪಾಲಿಸಬೇಕು ಎಂದು ತಿಳಿಸಿದರು.
ಬಳಿಕ ಮಾತನಾಡಿದ ಆಸಿಯಾ ಬಿ., ಪೋಷಕರಾದ ಸೈಯದ್ ಆರಿಫ್, ನಮ್ಮ ತಾಯಿ, ಹೆಂಡ್ತಿ ಎಲ್ಲರೂ ಹಿಜಾಬ್ ಹಾಕಿಕೊಂಡೆ ಹೋಗೋದು. ಸ್ಕೂಲ್ಗೆ ಎಲ್ಲ ಹಿಜಾಬ್ ಹಾಕಿಕೊಂಡೆ ಹೋಗ್ತಾ ಇದ್ದರೂ, ಇದೀಗ ಈ ಪರಿಸ್ಥಿತಿಯಿಂದಾಗಿ ಮಗಳು ಕ್ಲಾಸ್ ರೂಮಿಗೆ ಹೋಗಿ ಹಿಜಾಬ್ ಧರಿಸದೆ ಪರೀಕ್ಷೆ ಬರೆಯುತ್ತಾಳೆ ಎಂದರು.