ಬೆಂಗಳೂರು: ಐಐಎಂ ಸಂಸ್ಥೆ ಮಾಲೀಕನಿಗೂ ನನಗೆ ಯಾವುದೇ ಸಂಬಂಧವಿಲ್ಲ. ನಿವೇಶನ ಮಾರಾಟ ವಿಚಾರದಲ್ಲಿ ಪರಿಚಯವಾಗಿದ್ದು ಬಿಟ್ಟರೆ ಬೇರೆನೂ ಗೊತ್ತಿಲ್ಲ. ಎಸ್ಐಟಿ ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದು, ತನಿಖೆಗೆ ಸಹಕರಿಸಿದ್ದೇನೆಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಮನ್ಸೂರ್ ಯಾರೆಂದು ಗೊತ್ತಿಲ್ಲ, SIT ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರುವೆ: ಜಮೀರ್ ಅಹಮದ್
ಐಐಎಂ ಸಂಸ್ಥೆ ಮಾಲೀಕ ಮನ್ಸೂರ್ ಖಾನ್ಗೂ ಹಾಗೂ ನನಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ಸತತ 9 ಗಂಟೆಗಳಿಂದ ಎಸ್ಐಟಿ ತನಿಖಾಧಿಕಾರಿಗಳ ವಿಚಾರಣೆ ಎದುರಿಸಿ ಹೊರ ಬಂದು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, 2017ರಲ್ಲಿ ರಿಚ್ಮಂಡ್ ರಸ್ತೆಯಲ್ಲಿರುವ ನಿವೇಶನ ಮಾರಾಟ ಮಾಡಲು ಮುಂದಾಗಿದ್ದೆ. ಈ ವೇಳೆ ಬಿಬಿಎಂಪಿ ನಾಮನಿರ್ದೇಶನ ಸದಸ್ಯನಾಗಿದ್ದ ಸೈಯದ್ ಮುಜಾಯಿದ್ ಮೂಲಕ ನನಗೆ ಮನ್ಸೂರ್ ಪರಿಚಿತನಾಗಿದ್ದನು. 2009ರಲ್ಲಿ ಖರೀದಿಸಿದ್ದ ನಿವೇಶನವು ಕೋರ್ಟ್ನಲ್ಲಿ ಇದ್ದಿದ್ದರಿಂದ ರೂ. 3.80 ಕೋಟಿಯಷ್ಟಿದ್ದ ನಿವೇಶನವನ್ನು 9.38 ಕೋಟಿ ರೂ.ಮಾರಾಟ ಮಾಡಿ, 5ಕೋಟಿ ರೂ.ಲಾಭ ಗಳಿಸಿದ್ದೇನೆ. ಮಾರಾಟ ಮಾಡಿದ ಎಲ್ಲ ದಾಖಲೆಗಳನ್ನು ಎಸ್ಐಟಿಗೆ ನೀಡಿದ್ದೇನೆ ಎಂದರು.
ಎಸ್ಐಟಿ ವಿಚಾರಣೆ ಪೂರ್ಣಗೊಂಡಿದೆ. ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ತನಿಖಾಧಿಕಾರಿಗಳು ಕರೆದರೆ ಮತ್ತೆ ವಿಚಾರಣೆಗೆ ಹಾಜರಾಗುತ್ತೇನೆ. ಮನ್ಸೂರ್ ಖಾನ್ ನನಗೆ ಪರಿಚಯವಿಲ್ಲ. ಅವನಿಗೂ ನನಗೂ ಸಂಬಂಧವಿಲ್ಲ. ಎಲ್ಲೋ ಇಪ್ತಿಯಾರ್ ಕೂಟದಲ್ಲಿ ಸೇರಿದ್ದು ಅಷ್ಟೇ. ಮತ್ತೆ ವಿಚಾರಣೆಗೆ ಕರೆದರೆ ಬರಬೇಕು ಅಂದಿದ್ದಾರೆ, ಬರುತ್ತೇನೆ. ನಿವೇಶನದ ದಾಖಲೆಗಳನ್ನ ಎಸ್ಐಟಿ ಮುಂದೆ ಕೊಟ್ಟಿದ್ದೇನೆ ಎಂದು ಪುನರುಚ್ಚಿಸಿದ್ದರು.